ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ ಡಿಎ ತೆಕ್ಕೆಗೆ ಹಾರಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಫೆಬ್ರವರಿ 10ರಂದು ವಿಶ್ವಾಸಮತ ಯಾಚನೆ ಯ ಅಗ್ನಿಪರೀಕ್ಷೆ ನಡೆಯಲಿದೆ.
ಮಂಗಳವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಹೊಸ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರವು ಫೆಬ್ರವರಿ 10 ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಕೇಳಲಿದೆ.
ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಾಂಪ್ರದಾಯಿಕ ಭಾಷಣ ಮಾಡಿದ ನಂತರ ಬಜೆಟ್ ಅಧಿವೇಶನದ ಮೊದಲ ದಿನದಂದು ಸರ್ಕಾರ ವಿಶ್ವಾಸ ಮತವನ್ನು ಕೇಳಲಿದೆ.
ಈ ವಿಶೇಷ ಅಧಿವೇಶನವು ಒಟ್ಟು 12 ಕೆಲಸದ ದಿನಗಳನ್ನು ಹೊಂದಿದ್ದು, ಫೆಬ್ರವರಿ 12 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜನತಾ ದಳ-ಯುನೈಟೆಡ್ (ಜೆಡಿಯು)ನ ಅಧ್ಯಕ್ಷ ನಿತೀಶ್ ಕುಮಾರ್, ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬೆಳವಣಿಗೆ ಬಳಿಕ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದ್ದರು. ಆ ಮೂಲಕ ದಾಖಲೆಯ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ 18 ತಿಂಗಳ ಹಿಂದಿನ ಮಹಾಘಟ್ ಬಂಧನ್ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟಿದ್ದರು.