ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವ ಸಂದರ್ಭದಲ್ಲಿ, ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಮಹಾಘಟಬಂಧನ್ ಮೈತ್ರಿಕೂಟ ಪರವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಅವರು ಇಂದು ನಾಲ್ಕು ಭಿನ್ನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಜನರಿಗೆ ವಿಶೇಷ ಭರವಸೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಅವರು ಮೈತ್ರಿಕೂಟದ ಉದ್ದೇಶ ಮತ್ತು ಯೋಜನೆಗಳನ್ನು ವಿವರಿಸಿದರು.
ತೇಜಸ್ವಿ ಯಾದವ್ ಅಧಿಕೃತವಾಗಿ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಅವರ ಘೋಷಣೆಯಲ್ಲಿ, ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಗ್ರಾಮ, ತಾಲೂಕು ಮತ್ತು ಜಿಲ್ಲೆ ಮಟ್ಟದ ಪಂಚಾಯತ್ ಪ್ರತಿನಿಧಿಗಳ ಭತ್ಯೆಯನ್ನು ಡಬಲ್ ಮಾಡಲಾಗುವುದು ಮತ್ತು 50 ಲಕ್ಷ ರೂ.ವರೆಗೂ ವಿಮೆ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಪಿಡಿಎಸ್ ವಿತರಕರಿಗೆ ಗೌರವಧನ ನೀಡಲಾಗುವುದು ಮತ್ತು ಪ್ರತಿಕ್ವಿಂಟಾಲ್ ಮಾರ್ಜಿನ್ ಹಣ ಹೆಚ್ಚಿಸುವುದರೊಂದಿಗೆ ಕುಂಬಾರರು, ಕಮ್ಮಾರರು ಮತ್ತು ಬಡಗಿಗಳಂತಹ ಶ್ರಮಜೀವಿಗಳಿಗೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸುವುದಾಗಿ ಘೋಷಿಸಿದರು. ಇದೇ ರೀತಿಯಾಗಿ, 5 ವರ್ಷದಲ್ಲಿ 5 ಲಕ್ಷ ರೂ. ಏಕಕಾಲಿಕ ನೆರವು, ಸರ್ಕಾರಿ ಉದ್ಯೋಗಗಳಿಗೆ ಅನುಕಂಪ ನೇಮಕಾತಿ ಮತ್ತು 58 ವರ್ಷ ವಯಸ್ಸಿನ ಮಿತಿ ತೆಗೆದುಹಾಕುವುದು ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬರುವುದಾಗಿ ಪ್ರಕಟಿಸಿದರು.
ಎನ್‌ಡಿಎ ವಿರುದ್ಧ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ನಡೆಸಿ, ಪ್ರಸ್ತುತ ಸರ್ಕಾರವನ್ನು ದೃಷ್ಟಿಹೀನ ಮತ್ತು ಭ್ರಷ್ಟ ಸರ್ಕಾರವೆಂದು ಟೀಕಿಸಿದರು. ಬಜೆಟ್‌ನಲ್ಲಿ ಬಿಹಾರಕ್ಕೆ ಬರಬೇಕಾದ ಹಣ ಗುಜರಾತ್‌ಗೆ ಹೋಗುತ್ತಿದೆ ಎಂಬ ಆರೋಪವನ್ನು ಮಾಡಿದರು.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 6ರಂದು ಮೊದಲ ಹಂತ, ನವೆಂಬರ್ 11ರಂದು ಎರಡನೇ ಹಂತದ ಚುನಾವಣೆಯನ್ನು ನಡೆಸಿ, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

