ಹೊಸ ದಿಗಂತ ವರದಿ, ಚಿತ್ರದುರ್ಗ:
ಕರ್ನಾಟಕ ರಾಜ್ಯದಲ್ಲಿ ೨೦೨೮ ರ ಚುನಾವಣೆಯಲ್ಲಿ ಬಿಹಾರದ ಫಲಿತಾಂಶ ಮರುಕಳಿಸಲಿದೆ. ೨೦೨೮ ರಲ್ಲಿ ಬಿಹಾರಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮಲು ಭವಿಷ್ಯ ನುಡಿದರು.
ಚಿತ್ರದುರ್ಗ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಶಾಸಕರು ಮಂತ್ರಿ ಸ್ಥಾನಕ್ಕೆ ದೆಹಲಿಗೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಸಿದಿದ್ದು, ಆಡಳಿತ ಯಂತ್ರ ಸ್ಥಗಿತವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಇದ್ದರೂ ಜನರ ಪಾಲಿಗೆ ಸತ್ತಂತಾಗಿದೆ. ಇವರು ಮಾತ್ರ ಬ್ರೇಕ್ ಪಾಸ್ಟ್ ಮಾಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಕೇವಲ ಇದನ್ನೇ ಮಾಡಿಕೊಂಡು ೨.೫ ವರ್ಷ ಕಳೆದು ಬಿಟ್ಟಿದ್ದಾರೆ. ಹಾಗಾಗಿ ರಾಜ್ಯದ ಜನರು ಬೇಸತ್ತಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ, ಡಿಸಿಎಂ ಕೂಡಿಕೊಂಡು ಬ್ರೇಕ್ ಪಾಸ್ಟ್ ಮಾಡುತ್ತ್ತಾರೋ, ಲಂಚ್ ಮಾಡುತ್ತಾರೋ, ಡಿನ್ನರ್ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದ ರೈತರಿಗೆ ನ್ಯಾಯ ಸಿಗಬೇಕು. ಕಾಂಗ್ರೇಸ್ ಪಕ್ಷದಲ್ಲಿ ಈಗ ಸಿಎಂ, ಡಿಸಿಎಂ ನಡುವೆ ಕದನ ವಿರಾಮ ಎಂದು ಹೇಳುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ಇದೇ ರೀತಿ ಕದನ ವಿರಾಮ ಆಗಿತ್ತು. ಮೂರು ತಿಂಗಳ ಬಳಿಕ ಒಬ್ಬರಿಗೊಬ್ಬರು ಬಾಂಬ್ ಹಾಕಿದ್ದರು. ಡಿಕೆಶಿ ಮತ್ತು ಸಿದ್ದರಾಮಯ್ಯ ಯಾವತ್ತು ಪರಸ್ಪರ ಬಾಂಬ್ ಹಾಕುತ್ತಾರೋ ಗೊತ್ತಿಲ್ಲ ಎಂದುರು.
ಬಿ.ವೈ.ವಿಜಯೇಂದ್ರ ಪಾರ್ಟಿ ಅಧ್ಯಕ್ಷರಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಚುನಾವಣೆ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಎಂದು ಮೊದಲೇ ಹೇಳಿದ್ದರು. ಸಂಸತ್ ಅಧಿವೇಶನ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಬಹುದು. ಹೊಸ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಬಳಿಕ ಪಕ್ಷ ಎಲ್ಲರ ಅಭಿಪ್ರಾಯ ಪಡೆದು ರಾಜ್ಯ ಅಧ್ಯಕ್ಷರ ನೇಮಕ ಮಾಡುತ್ತದೆ. ಮುಂದೆ ವಿಜಯೇಂದ್ರ ಅವರನನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಬೇಕು ಎಂದು ಹೇಳುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

