ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ್ದ ಟೀಂ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ, ಇದೀಗ ಎರಡನೇ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ವೈಭವ್ ಕೇವಲ ಅರ್ಧಶತಕ ಗಳಿಸಿದ್ದಲ್ಲದೆ, ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ಕೇವಲ 14 ವರ್ಷ ಮತ್ತು 296 ದಿನಗಳ ಪ್ರಾಯದ ವೈಭವ್, ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನದ ಶಾಹಿದುಲ್ಲಾ ಕಮಲ್ (15 ವರ್ಷ, 19 ದಿನ) ಅವರ ಹೆಸರಲ್ಲಿದ್ದ ದಶಕದ ಹಳೆಯ ದಾಖಲೆಯನ್ನು ಸೂರ್ಯವಂಶಿ ಅಳಿಸಿ ಹಾಕಿದ್ದಾರೆ.
ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ವೈಭವ್ ಆಸರೆಯಾದರು. ಕೇವಲ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಈ ಆವೃತ್ತಿಯ ವೇಗದ ಅರ್ಧಶತಕವನ್ನು ಪೂರೈಸಿದರು. 13ನೇ ಓವರ್‌ನಲ್ಲಿ ಸಿಂಗಲ್ ಪಡೆಯುವ ಮೂಲಕ ಅವರು ಈ ಐತಿಹಾಸಿಕ ಮೈಲಿಗಲ್ಲು ತಲುಪಿದರು.
ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದ ವೈಭವ್, ಅಭಿಗ್ಯಾನ್ ಕುಂಡು ಅವರೊಂದಿಗೆ ಸೇರಿ 62 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಶತಕದತ್ತ ನುಗ್ಗುತ್ತಿದ್ದ ಇವರು 67 ಎಸೆತಗಳಲ್ಲಿ 72 ರನ್ (6 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ವೈಭವ್ ಅವರ ಈ ಸ್ಫೋಟಕ ಆಟ ಭಾರತದ ಸ್ಕೋರ್ 100ರ ಗಡಿ ದಾಟಲು ನೆರವಾಯಿತು. ಅವರ ಬೆನ್ನಲ್ಲೇ ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ಕೂಡ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರು.


