ಹೊಸದಿಗಂತ ವರದಿ,ಮದ್ದೂರು :
ಪಟ್ಟಣದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಅಪರಿಚಿತ ವಾಹನಕ್ಕೆ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದು ಖಾಸಗಿ ಕಂಪನಿಗಳ ಉದ್ಯೋಗಿಗಳಿಬ್ಬರು ಸ್ಥಳದಲ್ಲೇ ಅಸುನೀಗಿರುವ ಘಟನೆ ಜರುಗಿದೆ.
ಬೆಂಗಳೂರಿನ ಆಡುಗೋಡಿಯ ಭಾಷ್ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿರುವ ಜನಾರ್ಧನ ಪೂಜಾರಿ (21) ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ಟೆಕ್ನಿಷಿಯನ್ ಮಣಿಕಂಠ (25) ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತಪಟ್ಟಿರುವ ಜನಾರ್ಧನ್ ಪೂಜಾರಿ ಮೂಲತಃ ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕಿನ ಲಿಂಗನಮಂಠಿ ಗ್ರಾಮದವನಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಮಣಿಕಂಠ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಕೃಷ್ಣಗಿರಿಯ ನಿವಾಸಿ ಎಂದು ಗುರುತಿಸಲಾಗಿದೆ.
ಮಣಿಕಂಠ ಮತ್ತು ಜನಾರ್ಧನ ಪೂಜಾರಿ ಅವರು ತಮ್ಮ ಬಜಾಬ್ ಎಂ.ಸಿ. ಬೈಕ್‌ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ದಶಪಥ ಹೆದ್ದಾರಿಯ ಮೇಲು ಸೇತುವೆಯಲ್ಲಿ ಮಣಿಕಂಠ ಚಾಲನೆ ಮಾಡುತ್ತಿದ್ದ ಬೈಕ್ ಮುಂದೆ ಹೋಗುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸಂಚಾರಿ ಠಾಣೆ ಪಿಎಸ್‌ಐ ಸಿದ್ದರಾಜು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.
ಡಿವೈಎಸ್ಪಿ ನವೀನ್‌ಕುಮಾರ್, ಇನ್ಸ್‌ಪೆಕ್ಟರ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.