ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀಪ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ಗುರುವಾರ ರಾತ್ರಿ ಈ ನಡೆದಿದ್ದು, ಮೃತರನ್ನು ಅತ್ತಿಗುಪ್ಪೆ ಗ್ರಾಮದ ಹುಚ್ಚಯ್ಯರ ಪುತ್ರ ನಾಗರಾಜು (48) ಹಾಗೂ ಶಿವರಾಜು (45) ಎಂದು ಗುರುತಿಸಲಾಗಿದೆ.
ಶಿವರಾಜು ತನ್ನ ಬೈಕಿನಲ್ಲಿ ನಾಗರಾಜು ಅವರೊಂದಿಗೆ ಗುರುವಾರ ಸಂಜೆ ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಿಲ್ಕುಂದದ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಮುಗಿಸಿಕೊಂಡು ವಾಪಾಸಾಗುತ್ತಿದ್ದ ತಂಬಾಕು ಖರೀದಿ ಕಂಪನಿಯೊಂದಕ್ಕೆ ಸೇರಿದ ಜೀಪ್ ಮೈಸೂರು-ಬಂಟ್ವಾಳ ಹೆದ್ದಾರಿಯ ಕೊತ್ತೆಗಾಲ ಗೇಟ್ ಬಳಿಯಲ್ಲಿ ಡಿಕ್ಕಿಯಾಗಿದೆ. ಇದರಿಂದಾಗಿ ಗಾಯಗೊಂಡಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಜ್ಜುಗುಜ್ಜಾಗಿದ್ದು, ಶವಗಳು ಸಹ ಗುರುತು ಹಿಡಿಯಲಾರದಷ್ಟು ಛಿದ್ರವಾಗಿತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.