ಹೊಸದಿಗಂತ ವರದಿ, ಮದ್ದೂರು :
ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿರುವ ಘಟನೆ ಪಟ್ಟಣದ ಶಿವಪುರದ ಬಳಿ ಸಂಜೆ ಜರುಗಿದೆ.
ತಾಲೂಕಿನ ಸೋಮನಹಳ್ಳಿಯ ರಮೇಶ್ ಪುತ್ರ ಅಮಿತ್‌ಗೌಡ (19) ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಮಿತ್‌ನನ್ನು ಮದ್ದೂರು. ಮಂಡ್ಯ ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಕೊನೆ ಉಸಿರೆಳೆದಿದ್ದಾನೆ.
ಮೃತ ಅಮಿತ್ ಕಾರ್ಯನಿಮಿತ್ತ ಸಗ್ರಾಮ ಸೋಮನಹಳ್ಳಿಯಿಂದ ಮದ್ದೂರಿಗೆ ತನ್ನ ಬೈಕಿನಲ್ಲಿ ಬರುತ್ತಿದ್ದನು. ಹಳೆ ಮೈಸೂರು ಬೆಂಗಳೂರು ಹೆದ್ದಾರಿಯ ಶಿಂಷಾ ನದಿ ಸೇತುವೆ ಬಳಿ ಇರುವ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.