ರೈಲ್ವೆ ಬ್ರಿಡ್ಜ್​ಗೆ ಗುದ್ದಿದ ಬೈಕ್​ : ಸೇತುವೆ ಕೆಳಗೆ ಬಿದ್ದು ಕೇರಳದ ಯುವಕರಿಬ್ಬರು ದುರ್ಮರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಿಂದ ಬೈಕ್​ನಲ್ಲಿ ಗೋವಾಗೆ ತೆರಳಿ ಮರಳುವಾಗ ದಾವಣಗೆರೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಪಾಲಕ್ಕಾಡ್​​ನ ಅತುಲ್ (25), ಋಷಿಕೇಶ್ ( 24) ಎಂದು ಗುರುತಿಸಲಾಗಿದೆ.‌

ದಾವಣಗೆರೆಯ ಎಸ್​ಎಸ್ ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದ್ದು, ಕೇರಳದಿಂದ ಯುವಕರು ಬಂದಿದ್ದರು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ‌ಎನ್​ಫೀಲ್ಡ್ ಹಿಮಾಲಯನ್ ಬೈಕ್​ನಲ್ಲಿ ಕೇರಳದಿಂದ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ತೆರಳಿದ್ದರು. ಗೋವಾದಲ್ಲಿ ತಮ್ಮ ಕಾರ್ಯ ಮುಗಿಸಿಕೊಂಡು ಯುವಕರಿಬ್ಬರು ಮತ್ತೆ ಕರ್ನಾಟಕದ ಮೂಲಕ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆ ಬಳಿ ತಡರಾತ್ರಿ ಅಪಘಾತ ‌ಸಂಭವಿಸಿದೆ.

ಓವರ್ ಸ್ಪೀಡ್​ನಲ್ಲಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 54ರ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮೇಲಿಂದ ಯುವಕರು ರೈಲ್ವೆ ಹಳಿ ಬಳಿ ಪಕ್ಕದಲ್ಲಿ ಬಿದ್ದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯ ಮಧ್ಯದಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಎಸ್​ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!