ಹೊಸದಿಗಂತ ವರದಿ,ಕುಶಾಲನಗರ:
ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರು ಕೈಗಾರಿಕಾ ಕೇಂದ್ರದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ನಿವಾಸಿ ಗಂಗಾಧರ (45) ಮೃತ ದುರ್ದೈವಿ.
ಕುಶಾಲನಗರದಲ್ಲಿ ಖಾಸಗಿ ಕಂಪನಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಗಂಗಾಧರ ಕೂಡಿಗೆಯಲ್ಲಿ ಕೆಲಸ ಮುಗಿಸಿ ಕೂಡ್ಲೂರಿನ ನಿವಾಸದತ್ತ ತೆರಳುತ್ತಿದ್ದ ಸಂದರ್ಭ ಹಾಸನದಿಂದ ಕೈಗಾರಿಕಾ ಬಡಾವಣೆಯತ್ತ ಆಗಮಿಸುತ್ತಿದ್ದ ಸಿಮಂಟ್ ತುಂಬಿದ್ದ ಲಾರಿ (ಕೆಎ.40.ಎ.2508) ಅಡಿಗೆ ಬೈಕ್ (ಕೆಎ.17.ಇಯು.3930) ಸಿಲುಕಿದೆ.
ಈ ಸಂದರ್ಭ ಸವಾರನ ಮೈಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದ್ದು, ಗಂಗಾಧರ ಅವರ ದೇಹ ಎರಡು ತುಂಡುಗಳಾಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.