ಹೊಸದಿಗಂತ ವರದಿ,ಮಡಿಕೇರಿ:
ಬೈಕ್ ಕಳವು ಪ್ರಕರಣವೊಂದನ್ನು ಪತ್ತೆಹಚ್ಚಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ನಾಲ್ಕು ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಕ್ಕಬೆ ಬಳಿಯ ಕುಂಜಿಲ ಗ್ರಾಮದ ನಿವಾಸಿ ಮೋಹನ್ ರಾಜ್ ಎಂಬಾತನೇ ಬಂಧಿತ ಆರೋಪಿ.
ನಾಪೋಕ್ಲು ಠಾಣೆ ವ್ಯಾಪ್ತಿಯ ಪಾರಾಣೆ ಗ್ರಾಮದಲ್ಲಿ ಬೈಕೊಂದು ಕಳವಾದ ಬಗ್ಗೆ ಆ.1ರಂದು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಉಸ್ತುವಾರಿಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದ ಪತ್ತೆ ತಂಡವು ಪ್ರಕರಣವನ್ನು ಬೇಧಿಸಿ ಆರೋಪಿಯಿಂದ ಪಾರಾಣೆಯಲ್ಲಿ ಕಳವು ಮಾಡಿದ ಬೈಕ್ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಕಳವಾಗಿದ್ದ ಇನ್ನೂ ಮೂರು ಬೈಕುಗಳು ಸೇರಿದಂತೆ ಸುಮಾರು ರೂ. 2 ಲಕ್ಷ ಬೆಲೆಯ ಒಟ್ಟು ನಾಲ್ಕು ಬೈಕುಗಳನ್ನು ವಶಪಡಿಸಿಕೊಂಡಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ತಂಡದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಎಂ.ಕೆ.ಸದಾಶಿವ, ಪ್ರೊ.ಪಿಎಸ್ಐ ಹೆಚ್.ಎಸ್.ಪ್ರಮೋದ್, ಎಎಸ್ಐ ಗೋಪಾಲಕೃಷ್ಣ, ಎಎಸ್ಐ ಹೆಚ್.ಜೆ.ಮಹೇಶ್ ಹಾಗೂ ಸಿಬ್ಬಂದಿಗಳಾದ ಎಂ.ಆರ್.ರವಿಕುಮಾರ್, ಸಾಜನ್, ರಾಮಕೃಷ್ಣ, ಮಧುಸೂದನ್, ಎನ್.ನವೀನ, ಶರತ್ ಕುಮಾರ್, ಬಸವರಾಜು, ಪಂಚಲಿಂಗಪ್ಪ ಸತ್ತಿಗೇರಿ, ಗಿರೀಶ್, ಶಿವಪ್ರಸಾದ್ ಹಾಗೂ ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಮತ್ತು ಪ್ರವೀಣ್ ಪಾಲ್ಗೊಂಡಿದ್ದರು.