ಧಾರಾಕಾರ ಮಳೆಗೆ ನದಿ-ಕೆರೆಗಳು ಮೈದುಂಬಿ ಹರಿಯುತ್ತಿದ್ದರೆ, ಕೆಲವರಿಗೆ ಸಾಹಸದ ಹುಚ್ಚು ಮಾತ್ರ ಕಮ್ಮಿಯಾಗಲ್ಲ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಇಂತಹುದೇ ಒಂದು ಘಟನೆ ನಡೆದಿದ್ದು, ನೋಡಿದವರ ಎದೆ ಜಲ್ಲೆನ್ನುವಂತಿದೆ. ರಣಥಂಬೋರ್ ಅರಣ್ಯ ಮತ್ತು ಬೆಟ್ಟಗುಡ್ಡಗಳ ಕಡೆಯಿಂದ ಹರಿದುಬರುವ ‘ಝರೇಟಿ’ ಹಳ್ಳ ತುಂಬಿ ಹರಿಯುತ್ತಿತ್ತು. ರಸ್ತೆಯಿಡೀ ಮಳೆನೀರು ಆವರಿಸಿಕೊಂಡು, ನೀರಿನ ರಭಸಕ್ಕೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನೀರು ಕಮ್ಮಿಯಾಗಲಿ ಎಂದು ರಸ್ತೆಯ ಎರಡೂ ಬದಿಯಲ್ಲಿ ಜನ, ವಾಹನಗಳನ್ನು ನಿಲ್ಲಿಸಿಕೊಂಡು ಸುಮ್ಮನೆ ಕಾಯುತ್ತಿದ್ದರು.
ಆದರೆ, ಇಲ್ಲೊಬ್ಬ ಮಹಾಶಯನಿಗೆ ಎಲ್ಲರಿಗಿಂತ ಬೇಗ ಮನೆಗೆ ತಲುಪುವ ಧಾವಂತ. ನನ್ನ ಬೈಕ್‌ನಲ್ಲಿ ಇದನ್ನು ಸುಲಭವಾಗಿ ದಾಟಿಬಿಡ್ತೀನಿ ಅನ್ಕೊಂಡು, ಎಲ್ಲರೂ ಬೇಡ ಬೇಡ ಎಂದು ಕೂಗಿ ಹೇಳುತ್ತಿದ್ದರೂ ಕೇಳದೆ ನೇರವಾಗಿ ಆ ರಭಸವಾಗಿ ಹರಿಯುತ್ತಿದ್ದ ನೀರಿಗೆ ಬೈಕ್ ಇಳಿಸಿಯೇ ಬಿಟ್ಟ.
ಇದೆಂತ ಹುಚ್ಚು ಸಾಹಸ?
ಸ್ವಲ್ಪ ದೂರ ಗಾಡಿ ಚಲಾಯಿಸಿದ ತಕ್ಷಣ ನೀರಿನ ಅಸಲಿ ಗತ್ತು ಏನೆಂದು ಅವನಿಗೆ ಗೊತ್ತಾಯ್ತು. ನೀರಿನ ರಭಸಕ್ಕೆ ಬೈಕ್ ಬ್ಯಾಲೆನ್ಸ್ ತಪ್ಪಿ, ಕಣ್ಣುಮಚ್ಚಿ ತೆರೆಯುವುದರೊಳಗೆ ಆತ ಮತ್ತು ಆತನ ಬೈಕ್ ಇಬ್ಬರೂ ನೀರಿನಲ್ಲಿ ಕೊಚ್ಚಿಹೋದರು. ‘ಅಯ್ಯೋ ಹೋಯ್ತು ಹೋಯ್ತು’ ಎಂದು ದಡದಲ್ಲಿದ್ದ ಜನರು ಕಿರುಚಾಡಲು ಶುರುಮಾಡಿದರು.
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದಾಗಲೂ ಆತನಿಗೆ ಬೈಕ್ ಮೇಲಿದ್ದ ಪ್ರೀತಿ ಕಡಿಮೆಯಾಗಲಿಲ್ಲ. ಕೊಚ್ಚಿಹೋಗುತ್ತಿದ್ದ ಗಾಡಿಯನ್ನು ಬಿಡದೇ ಗಟ್ಟಿಯಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿದ. ಆದರೆ ಪ್ರಕೃತಿಯ ಮುಂದೆ ಆತನ ಶಕ್ತಿ ಏನೇನೂ ಸಾಲಲಿಲ್ಲ. ನೀರಿನ ರಭಸಕ್ಕೆ ಬೈಕ್ ಕೈತಪ್ಪಿ ಹಳ್ಳದ ಆಳಕ್ಕೆ ಮುಳುಗಿಯೇ ಹೋಯಿತು.
ಬೈಕ್ ಮಿಸ್ ಆದ್ರೂ, ಲೈಫ್ ಸೇಫ್
ಬೈಕ್ ಕೈತಪ್ಪಿದರೂ ಆ ವ್ಯಕ್ತಿ ಹೇಗೋ ಕಷ್ಟಪಟ್ಟು ಪಕ್ಕದಲ್ಲಿದ್ದ ದಡಕ್ಕೆ ಈಜಿ ಪ್ರಾಣ ಉಳಿಸಿಕೊಂಡಿದ್ದಾನೆ. ಮೈ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಆತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಆದರೆ, ಆತನ ಬೈಕ್ ಮಾತ್ರ ನೀರಿನ ಸೆಳೆತಕ್ಕೆ ಸಿಕ್ಕಿ ಸಂಪೂರ್ಣವಾಗಿ ಕೊಚ್ಚಿಹೋಯ್ತು.
ಸ್ವಲ್ಪ ಅರ್ಥ ಮಾಡ್ಕೊಳಿ!
ಈ ಘಟನೆ ಈಗ ಎಲ್ಲರಿಗೂ ದೊಡ್ಡ ಪಾಠ. ಪ್ರತಿ ವರುಷ ಮಳೆಗಾಲ ಬಂದ್ರೆ ಸಾಕು, ಪೊಲೀಸ್ ಹಾಗೂ ಆಡಳಿತದವರು “ಹರಿಯುವ ನೀರಿಗೆ ಇಳಿಯಬೇಡಿ, ರಸ್ತೆ ಮುಳುಗಿದ್ದರೆ ಸ್ವಲ್ಪ ಹೊತ್ತು ಕಾಯಿರಿ” ಎಂದು ಸೂಚನೆ ನೀಡ್ತಾರೆ. ಆದ್ರೆ ಕೆಲವರಿಗೆ ಈ ಮಾತು ಎಷ್ಟು ಹೇಳಿದ್ರು ಅರ್ಥವಾಗಲ್ಲ.
ನೆನಪಿಡಿ, ಬೈಕ್ ಹೋದ್ರೆ ನಾಳೆ ಇನ್ನೊಂದು ತಗೋಬಹುದು, ಆದ್ರೆ ಪ್ರಾಣ ಹೋದ್ರೆ ಮತ್ತೆ ಸಿಗುತ್ತಾ? ಹರಿಯುವ ನೀರನ್ನು ಯಾವತ್ತೂ ಹಗುರವಾಗಿ ತಗೋಬೇಡಿ. ನಿಮಗಾಗಿ ಮನೆಯಲ್ಲಿ ಕುಟುಂಬದವರು ಕಾಯ್ತಿರ್ತಾರೆ, ಸ್ವಲ್ಪ ಆತುರ ಬದಿಗಿಟ್ಟು ತಾಳ್ಮೆಯಿಂದ ಇರಿ.



