ಹೊಸದಿಗಂತ ಡಿಜಿಟಲ್ ಡೆಸ್ಕ್:
“ದ್ವಿಭಾಷಾ ಸೂತ್ರ ನನ್ನ ವೈಯಕ್ತಿಕ ಅಭಿಪ್ರಾಯ. ಅದನ್ನು ಸರ್ಕಾರದ ಅಭಿಪ್ರಾಯವಾಗಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಜೊತೆಗೆ ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರೊ. ಬರಗೂರು ರಾಮಚಂದ್ರಪ್ಪ ಸಂಪಾದಿಸಿರುವ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನ ಅರಿವಿಗಾಗಿ ಒಂದು ಸ್ವತಂತ್ರ ಸಂಸ್ಥೆ ಸ್ಥಾಪಿಸುವ ಸಲಹೆಗೂ ಅವರು ಬೆಂಬಲ ವ್ಯಕ್ತಪಡಿಸಿದರು. “ಜನರು ಸಂವಿಧಾನವನ್ನು ಓದುವುದಿಲ್ಲ, ಅರ್ಥಮಾಡಿಕೊಳ್ಳುವುದಿಲ್ಲ ಎಂಬುದು ದುಃಖಕರ. ಸಂವಿಧಾನವು ಮಹಾನ್ ದಾರ್ಶನಿಕರ ಸಂದೇಶಗಳಿಂದ ಕೂಡಿದ್ದು, ಅದು ಕೇವಲ ಪುಸ್ತಕವಲ್ಲ ನಮಗೆ ಮಾರ್ಗದರ್ಶನ ” ಎಂದು ಹೇಳಿದರು.
ಸಿದ್ದರಾಮಯ್ಯ ಬಸವಣ್ಣ ಮತ್ತು ಕುವೆಂಪು ಅವರ ಉದಾಹರಣೆ ನೀಡುತ್ತಾ, ಅವರು ತಮ್ಮ ಕೃತಿಗಳ ಮೂಲಕ ವೈಚಾರಿಕತೆ ಬೆಳೆಸಲು ಹೇಳಿದ್ದರು. ಆದರೆ ಜನರು ಇನ್ನೂ ಮೌಢ್ಯದಿಂದ ಹೊರಬರುವಲ್ಲಿ ಹಿಂಜರಿಯುತ್ತಿದ್ದಾರೆ, ಎಂದು ವಿಷಾದಿಸಿದರು.
ಶ್ರೀರಂಗಪಟ್ಟಣದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ ಬಳಿಕ, ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂಢಾತ್ಮರು ಮಾತ್ರ ಕಾಲುಗುಣದ ಬಗ್ಗೆ ಟೀಕೆ ಮಾಡುತ್ತಾರೆ. ಎರಡು ವರ್ಷಗಳಿಂದ ಉತ್ತಮ ಮಳೆ-ಬೆಳೆ ಆಗುತ್ತಿದೆ. ನಾವು ರೈತರಿಗೆ ಯಾವಾಗಲೂ ಬೆಂಬಲ ನೀಡಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ-ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ. ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ದಿವಾಳಿ ಆಗುವುದಿಲ್ಲ. ಕರ್ನಾಟಕದಲ್ಲಿ ಆರ್ಥಿಕ ಶಿಸ್ತಿನೊಂದಿಗೆ ಆಡಳಿತ ನಡೆಸುತ್ತಿರುವ ಏಕೈಕ ಸರ್ಕಾರವದು ಕಾಂಗ್ರೆಸ್,” ಎಂಬ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ತಮ್ಮ ನಿಲುವುಗಳನ್ನು ಧೈರ್ಯವಾಗಿ ಪ್ರಕಟಿಸಿದ್ದಾರೆ.