ಹೊಸದಿಗಂತ ವರದಿ, ಅಂಕೋಲಾ:
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬಿಪೋರ್ ಚಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಿದ್ದು ಜಿಲ್ಲೆಯ ಕರಾವಳಿ ತೀರಗಳಲ್ಲಿ ತೀವ್ರ ಎಚ್ಚರಿಕೆ ನೀಡಲಾಗಿದೆ.
ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಮೀನುಗಾರಿಕೆ ಬಂದರು ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದ್ದು ಯಾಂತ್ರಿಕೃತ ಮೀನುಗಾರಿಕೆ ನಿಷೇದ ಇರುವುದರಿಂದ ನಾಡ ದೋಣಿಗಳ ಮೂಲಕ ಮೀನುಗಾರಿಕೆಗೆ ತೆರಳಿದ ಮೀನುಗಾರರು ತಮ್ಮ ದೋಣಿ ಮತ್ತು ಮೀನುಗಾರಿಕೆ ಸಲಕರಣೆಗಳನ್ನು ಮೇಲೆತ್ತಿದ್ದಾರೆ.
ಅಂಕೋಲಾ ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ಆಳೆತ್ತರದ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸತೊಡಗಿದ್ದು ಅಲೆಗಳ ರುದ್ರ ನರ್ತನಕ್ಕೆ ಮೀನುಗಾರರು ಭಯಭೀತರಾಗಿದ್ದಾರೆ.
ಸುತ್ತ ಮುತ್ತಲಿನ ಇತರ ಕಡಲ ತೀರಗಳಲ್ಲೂ ಅಲೆಗಳ ಅಬ್ಬರ ಜೋರಾಗುತ್ತಿರುವ ಲಕ್ಷಣಗಳನ್ನು ಕಂಡು ಬರತೊಡಗಿವೆ.
ಕರಾವಳಿಯ ಕೆಲವು ಭಾಗಗಳಲ್ಲಿ ಸಂಜೆ ತುಂತುರು ಮಳೆ ಬೀಳತೊಡಗಿದ್ದು ಮುಂದಿನ 24 ಘಂಟೆಗಳಲ್ಲಿ ಭಾರೀ ಬಿರುಗಾಳಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ಸಮುದ್ರದ ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.