ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ದಿನನಿತ್ಯ ಬಿರಿಯಾನಿ ನೀಡಲು ಮುಂದಾಗಿವೆ.
ನಗರದ ಎಂಟು ವಲಯಗಳಲ್ಲಿ ಬೀದಿ ನಾಯಿಗಳಿಗೆ ಪ್ರತಿದಿನ ಚಿಕನ್ ಮತ್ತು ಎಗ್ ರೈಸ್ ನೀಡಲು ಬಿಬಿಎಂಪಿ 2.8 ಕೋಟಿ ರೂ.ಗಳ ಟೆಂಡರ್ ಕರೆದಿದೆ, ಪ್ರತಿ ವಲಯದಲ್ಲಿ ಸರಿಸುಮಾರು 600 ರಿಂದ 700 ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 3 ಲಕ್ಷ ಬೀದಿನಾಯಿಗಳಿದ್ದು, ಈ ಯೋಜನೆಯು ಆರಂಭದಲ್ಲಿ ಕೇವಲ 5,000 ನಾಯಿಗಳಿಗೆ ಮಾತ್ರ ಲಭ್ಯವಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಯೋಜನೆಯ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಎದ್ದಿದೆ.
ಬಿಬಿಎಂಪಿಯ ಈ ಬಾಡೂಟ ಯೋಜನೆ ಮಾನವೀಯತೆಯ ವಿಶಿಷ್ಟ ಪ್ರಯೋಗವೋ ಅಥವಾ ತೆರಿಗೆದಾರರ ಹಣದ ದುರುಪಯೋಗವೋ ಎಂಬ ಚರ್ಚೆಗೆ ದಾರಿ ಹಾಕಿದೆ. ಬೆಂಗಳೂರಿನ ಜನತೆಗೆ ಸಮರ್ಪಕ ಮೂಲಸೌಕರ್ಯಗಳಾದ ರಸ್ತೆ, ಆಹಾರ, ನೀರು, ವಸತಿ ವ್ಯವಸ್ಥೆ ಕಲ್ಪಿಸದಿದ್ದರೂ, ಬೀದಿ ನಾಯಿಗಳಿಗೆ ಪ್ರತಿದಿನ ಹೊಟ್ಟೆತುಂಬಾ ಚಿಕನ್ ಬಿರಿಯಾನಿ ನೀಡಲು ಬಿಬಿಎಂಪಿ 2.80 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ತರುತ್ತಿರುವುದಕ್ಕೆ ಹಲವರಿಂದ ಟೀಕೆ ವ್ಯಕ್ತವಾಗಿದೆ.