ಹೊಸ ದಿಗಂತ ಡಿಜಿಟಲ್ ಡೆಸ್ಕ್
ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಗೆ ಮಧ್ಯಪ್ರದೇಶದ ಉಸ್ತುವಾರಿ ನೀಡಲಾಗಿದೆ. ಅವರು ಈ ಹಿಂದೆ ಬಿಹಾರ ಮತ್ತು ಗುಜರಾತ್‌ನಲ್ಲಿ ನಡೆದ ಚುನಾವಣೆಗಳ ಮೇಲ್ವಿಚಾರಣೆ ನಡೆಸಿದ್ದರು. ಅವರಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೆರವು ನೀಡಲಿದ್ದಾರೆ.
ರಾಜಸ್ಥಾನದಲ್ಲಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಇಬ್ಬರು ಸಹ-ಇನ್ ಚಾರ್ಜ್‌ಗಳಾಗಿ ನಿತಿನ್ ಪಟೇಲ್ ಮತ್ತು ಕುಲದೀಪ್ ಬಿಷ್ಣೋಯ್ ಅವರನ್ನು ನೇಮಕ ಮಾಡಲಾಗಿದೆ.
ತೆಲಂಗಾಣದ ಉಸ್ತುವಾರಿಯಾಗಿ ಕೇಂದ್ರದ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಉಸ್ತುವಾರಿಯಾಗಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಜಾವಡೇಕರ್‌ಗೆ ಸಹಕಾರ ನೀಡಲಿದ್ದಾರೆ.
ಛತ್ತೀಸ್‌ಗಢದಲ್ಲಿ ಪಕ್ಷದ ಹಿರಿಯ ನಾಯಕ ಓಂ ಮಾಥುರ್ ಅವರು ಪಕ್ಷದ ಚುನಾವಣಾ ಉಸ್ತುವಾರಿಯಾಗಲಿದ್ದು, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಸಹಕಾರ ನೀಡಲಿದ್ದಾರೆ.