ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ನಿಕಟ ಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆವಿರುದ್ಧ ಬಿಜೆಪಿ ಗುಡುಗಿದ್ದು, ಕ್ಷಮೆಯಾಚಿಸಬೇಕು ಎಂದು ಮಂಗಳವಾರ ಒತ್ತಾಯಿಸಿದೆ.
ಸೋಮವಾರ ಛತ್ತೀಸ್‌ಗಢದ ರಾಯಪುರದಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ರಾಷ್ಟ್ರಪತಿ ಮುರ್ಮು ಮತ್ತು ಕೋವಿಂದ್ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರು ಆದರೆ ತ್ವರಿತವಾಗಿ ಅದನ್ನು ಸರಿಪಡಿಸಿಕೊಂಡರು.
ರಾಷ್ಟ್ರಪತಿಗಳನ್ನು “ಮುರ್ಮಾ ಜಿ” ಎಂದು ಕರೆದಿದ್ದಾರೆ. ನಂತರ ಆ ಹೆಸರನ್ನು “ಮುರ್ಮು” ಎಂದು ಸರಿಪಡಿಸಿಕೊಂಡಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ ಅವರು ಮತ್ತೆ ತಪ್ಪು ಮಾಡಿದರು. “ರಾಮನಾಥ್ ಕೋವಿಂದ್” ಅನ್ನು “ಕೋವಿಡ್” ಎಂದು ತಪ್ಪಾಗಿ ಉಚ್ಚರಿಸಿದ್ದರು.
ನಮ್ಮ ಜಲ, ಕಾಡು ಮತ್ತು ಜಮೀನನ್ನು ರಕ್ಷಿಸಬೇಕಾಗಿದೆ. ಆದ್ದರಿಂದ ನಾವು ಒಗ್ಗಟ್ಟಿನಿಂದ ಇರಬೇಕು. ಬಿಜೆಪಿಯವರು ನಾವು ದ್ರೌಪದಿ ಮುರ್ಮಾ (ದ್ರೌಪದಿ ಮುರ್ಮು) ಅವರನ್ನು ರಾಷ್ಟ್ರಪತಿಯನ್ನಾಗಿ, ರಾಮನಾಥ್ ಕೋವಿಡ್ (ಕೋವಿಂದ್) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ನಮ್ಮ ಸಂಪನ್ಮೂಲಗಳನ್ನು, ನಮ್ಮ ಕಾಡು, ಜಲ ಮತ್ತು ಜಮೀನ್ ಅನ್ನು ಕದಿಯಲು ಬಿಜೆಪಿಯವರು ಈ ರೀತಿ ಮಾಡಿದ್ದಾರೆ. ಇಂದು, ಅದಾನಿ ಮತ್ತು ಅಂಬಾನಿಯಂತಹ ಜನರು ಅದನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆಯನ್ನು ಮಹಿಳಾ ವಿರೋಧಿ, ದಲಿತ ವಿರೋಧಿ ಮತ್ತು ಬುಡಕಟ್ಟು ವಿರೋಧಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಇಡೀ ಬುಡಕಟ್ಟು ಸಮುದಾಯ ಇದನ್ನು ಖಂಡಿಸುತ್ತಿದೆ. ಅವರು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕೋವಿಡ್ ನಂತಹ ಪದಗಳನ್ನು ಸಹ ಬಳಸಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆಕ್ರೋಶ ಹೊರಹಾಕಿದ್ದಾರೆ.
‘ಖರ್ಗೆ ಅವರೇ, ನೀವು ದೊಡ್ಡದಾಗಿ ಮಾತನಾಡುತ್ತೀರಿ. ರಾಮ್ ನಾಥ್ ಕೋವಿಂದ್ ಅವರನ್ನು ‘ಕೋವಿಡ್’ ಎಂದು ಕರೆದಿದ್ದೀರಿ. ‘ಮುರ್ಮಾ ಜೀ’ ಅಂತಾ ಕರೆದು ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಭೂ ಮಾಫಿಯಾ ಎಂದು ಕರೆದಿದ್ದೀರಿ. ಆಸ್ತಿ, ಅರಣ್ಯಗಳನ್ನು ಕಿತ್ತುಕೊಳ್ಳಲು ಅವರು ರಾಷ್ಟ್ರಪತಿಯಾಗಿದ್ದಾರೆ ಎಂದು ಆರೋಪಿಸಿದ್ದೀರಿ ಎಂದು ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ಮುರ್ಮು ಮತ್ತು ಕೋವಿಂದ್ ವಿರುದ್ಧ ಅಪಮಾನಕಾರಿ, ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರು ಕ್ಷಮೆ ಯಾಚಿಸಬೇಕು ಎಂದು ಭಾಟಿಯಾ ಒತ್ತಾಯಿಸಿದ್ದಾರೆ. ದ್ರೌಪದಿ ಮುರ್ಮು ಮತ್ತು ಕೋವಿಂದ್ ಅವರಿಗೆ ಅಪಮಾನ ಮಾತ್ರ ಮಾಡಿಲ್ಲ. ಆದಿವಾಸಿ, ದಲಿತ ಸಮುದಾಯದ ಭಾವನೆಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಭಾಟಿಯಾ, ಖರ್ಗೆ ಹೇಳಿಕೆಗಾಗಿ ಕಾಂಗ್ರೆಸ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಲ್ಲದೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.