ಹೊಸದಿಗಂತ ವರದಿ, ಬಳ್ಳಾರಿ:
ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ, ಪಕ್ಷದ ಸಂಘಟನಾ ಚತುರ ಸಿದ್ದೇಶ್ ಯಾದವ್ (49) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಪತ್ನಿ ಇದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಂಗಳೂರು ನಗರದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ, ಕೂಡಲೇ ಬೆಂಗಳೂರು ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.ಮೂಲತಃ ಚಿತ್ರದುರ್ಗ ಜಿಲ್ಲೆಯ ಬಸಪ್ಪನ ಮಾಳಗಿ ಗ್ರಾಮದವರಾಗಿದ್ದು, ಸ್ವ ಗ್ರಾಮದಲ್ಲೇ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿ ಸುಮಾರು ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಕಳೆದ 4 ವರ್ಷಗಳಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಒಳಗೊಂಡ ಬಳ್ಳಾರಿ ವಿಭಾಗ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದರು. ವಿಜಯನಗರ, ಹೊಸಪೇಟೆ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಂಡೂರು ನಗರಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ಕಾರ್ಯಕ್ರಮದ ನೇತೃತ್ವ ವಹಿಸಿ ಪಕ್ಷದ ವರೀಷ್ಠರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಗಣ್ಯರ ಸಂತಾಪ: ಬಿಜೆಪಿ ಬಳ್ಳಾರಿ ವಿಭಾಗ್ ಪ್ರಮುಖ್ ಸಿದ್ದೇಶ್ ಯಾದವ್ ಅವರ ನಿಧನಕ್ಕೆ ಪಕ್ಷದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ದೇವರು ಶಾಂತಿ, ನೆಮ್ಮದಿ ನೀಡಲಿ, ಮೃತರ ಕುಟುಂಬಕ್ಕೆ ದೇವರು ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮಾಜಿ ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್, ಹಾಲಪ್ಪ ಆಚಾರ್, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಎಮ್ಮೆಲ್ಸಿ ಗಳಾದ ವೈ.ಎಂ.ಸತೀಶ್, ಹೇಮಲತಾ ನಾಯಕ್, ಮಾಜಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಟಿ.ಎಚ್.ಸುರೇಶ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಮುಖಂಡರಾದ ಕಾರ್ತೀಕೆಯ ಘೋರ್ಪಡೆ, ಅನೀಲ್ ನಾಯ್ಡು, ಎರ್ರಂಗಳಿ ತಿಮ್ಮಾರೆಡ್ಡಿ, ಕೆ.ರಾಮಲಿಂಗಪ್ಪ, ಎಸ್.ಗುರುಲಿಂಗನಗೌಡ, ಓಬಳೇಶ್ ಸಂಡೂರು ಸೇರಿದಂತೆ ಅನೇಕ ಗಣ್ಯರು ಪ್ರಾರ್ಥಿಸಿದ್ದಾರೆ.