ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ.
ಇತ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪತ್ನಿ ಗೀತಾ ಪರ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ಇದೀಗ ಶಿವರಾಜ್ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದ್ದು, ಅವರ ನಟನೆಯ ಚಿತ್ರ, ಜಾಹೀರಾತು ಹಾಗೂ ಬ್ಯಾನರ್ಗಳನ್ನು ನಿಷೇಧಿಸುವಂತೆ ಒಬಿಸಿ ಮೋರ್ಚಾ ಆಗ್ರಹಿಸಿದೆ.
ರಾಜ್ಯದಲ್ಲಿ ಪ್ರಭಾವಿ ವ್ಯಕ್ತಿ ಆಗಿರುವ ಶಿವರಾಜ್ಕುಮಾರ್ ಅವರು ರಾಜ್ಯದ್ಯಂತ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಅವರು ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ಕುಮಾರ್ ಅವರ ಸಿನಿಮಾ, ಜಾಹೀರಾತು, ಬಿಲ್ಬೋರ್ಡ್ಗಳನ್ನು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಚುನಾವಣಾ ಆಯೋಗವು ನ್ಯಾಯಯುತವಾದ ಚುನಾವಣೆಯನ್ನು ನಡೆಸುತ್ತದೆ ಎಂದು ನನಗೆ ಭರವಸೆ ಇದೆ. ನನ್ನ ಮನವಿಗೆ ಆಯೋಗವು ಸ್ಪಂದಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.