ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿಗಳಿಗೆ ಹಿಂದಿ ಸೇರಿದಂತೆ ಮೂರನೇ ಭಾಷೆಗೆ ಅಂಕಗಳನ್ನು ನೀಡದಿರುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ್ ನಾರಾಯಣ ಅವರು, ರಾಷ್ಟ್ರ ನಿರ್ಮಾಣಕ್ಕೆ ಭಾಷೆಯನ್ನು ಸಂಪರ್ಕ ಸಾಧನವಾಗಿ ಬಳಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಸರ್ಕಾರವು ಹಿಂದಿ ಭಾಷೆಯನ್ನು ಅನಗತ್ಯವಾಗಿ ವಿರೋಧಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ ಅವರು, ಶಿಕ್ಷಣ ವ್ಯವಸ್ಥೆಯನ್ನು ದ್ವಿಭಾಷಾ ನೀತಿಯತ್ತ ಬದಲಾಯಿಸುವ ಕ್ರಮವು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು. ಈ ನಿರ್ಧಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಭಾಷಾ ಕಲಿಕೆಯ ಹಕ್ಕನ್ನು ಮೊಟಕುಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



