ಹೊಸದಿಗಂತ ವರದಿ, ಮೈಸೂರು:
ಚುನಾವಣೆಯ ವೇಳೆ ಮಾಜಿ ಸಿಎಂ ಜಗದೀಶ್‌ಶೆಟ್ಟರ್ ಸೇರಿದಂತೆ ಕೆಲವರು ಬಿಜೆಪಿಯನ್ನು ಬಿಟ್ಟು ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ರಾಜ್ಯಸಭಾ ಸದಸ್ಯ ಸುಧಾಂಶು ತ್ರೀವೇದಿ ಹೇಳಿದರು.
ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಕಾರ್ಯಕರ್ತರ ಕೇಡರ್ ಬೇಸಿಸ್ ಆಧಾರಿತ ಪಕ್ಷವಾಗಿದ್ದು, ಯಾವುದೇ ನಾಯಕ, ಮುಖಂಡರು ಪಕ್ಷವನ್ನು ಬಿಟ್ಟು ಹೋದರೂ, ಅದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬಂಗಾರಪ್ಪ, ಎಸ್ ಎಂ ಕೃಷ್ಣ ಮುಂತಾದವರೆಲ್ಲ ಬಿಟ್ಟು ಬಿಜೆಪಿಗೆ ಬಂದಿದ್ದರು. ಇದೀಗ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕೂಡ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಾರೆ. ಇನ್ನೂ ಹಲವಾರು ನಾಯಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದರು.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವ ದಲಿತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಡಾ ಜಿ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಿದರು ಅಖಂಡ ಶ್ರೀನಿವಾಸನ ಮನೆಗೆ ಬೆಂಕಿ ಹಚ್ಚಿ ದಾಳಿಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಮಾಜಘಾತಕ ಶಕ್ತಿಗಳನ್ನು ಬೆಳಸಿಕೊಂಡು ಬಂದರು. ಸಮಾಜವನ್ನು ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡಿದರು. ಅವರ ಕಾಲದಲ್ಲಿ ನಡೆದಿದ್ದ ಭ್ರಷ್ಟಾಚಾರ ಹಗರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಎಸಿಬಿಯನ್ನು ರಚಿಸಿದರು. ಇದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರವೇ ಭ್ರಷ್ಟ ಅತಿ ಭ್ರಷ್ಟಾಡಳಿತ ಸರ್ಕಾರ ಎಂಬುದು ಸಾಬೀತಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಉಪಾಧ್ಯಾಯ, ಜಿಲ್ಲಾ ವಕ್ತಾರ ಡಾ.ಕೆ.ವಸಂತ್‌ಕುಮಾರ್, ನಗರ ವಕ್ತಾರ ಎಂ.ಎ.ಮೋಹನ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಕೇಬಲ್‌ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.