ಹೊಸದಿಗಂತ ವರದಿ,ಮಡಿಕೇರಿ:
ಬಿಜೆಪಿ ಸೋಲಿನ ಹಾದಿಯಲ್ಲಿದೆ. ಪ್ರತಿಪಕ್ಷಗಳ ಮಹಾಘಟ ಬಂಧನ್ ಕಂಡು ಬಿಜೆಪಿ ಹೆದರಿದೆ. ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆದ ದಿನದಂದೇ ತನ್ನ ಮಿತ್ರ ಪಕ್ಷಗಳ ಸಭೆ ನಡೆಸಿರುವುದೇ ಬಿಜೆಪಿ ಆತಂಕಕ್ಕೊಳಗಾಗಿರುವುದಕ್ಕೆ ಸಾಕ್ಷಿ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಖ್ ಯಾದವ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿಪಕ್ಷಗಳ ಸಭೆಯ ಬಳಿಕ ಮಡಿಕೇರಿಗೆ ಆಗಮಿಸಿ ವಾಸ್ತವ್ಯ ಹೂಡಿರುವ ಅವರು ಬುಧವಾರ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರದಿಂದಾಗಿ ಬಿಜೆಪಿ ಸೋತು ಹೋಗಿದೆ. ಇದೇ ಸ್ಥಿತಿ ಕೇಂದ್ರದಲ್ಲಿಯೂ ಆಗಲಿದೆ ಎಂದು ಭವಿಷ್ಯ ನಿಡಿದ ಅಖಿಲೇಶ್ ಯಾದವ್, ಸೋಲಿನ ಭಯದಿಂದ ಬಿಜೆಪಿ ದಿಕ್ಕು ತಪ್ಪಿದೆ. ಪ್ರತಿಪಕ್ಷಗಳ ಮೈತ್ರಿಯಿಂದಾಗಿ ಈಗ ‘ಇಂಡಿಯಾ’ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ‘ಇಂಡಿಯಾ’ವನ್ನು ಪ್ರಬಲಗೊಳಿಸುತ್ತಾ ಭಾರತೀಯರ ಆಶೋತ್ತರಕ್ಕೆ ತಕ್ಕಂತೆ ದೇಶವನ್ನು ಬಿಜೆಪಿ ಹಿಡಿತದಿಂದ ದೂರ ಮಾಡಲಿದ್ದೇವೆ ಎಂದು ನುಡಿದರು.
ಮ್ಯೂಸಿಯಂನಲ್ಲಿ ಜನರಲ್ ತಿಮ್ಮಯ್ಯ ಸೇನಾ ಸಾಧನೆ ಬಗ್ಗೆ ಮಾಹಿತಿ ಪಡೆದ ಅಖಿಲೇಶ್ ಯಾದವ್, ತಿಮ್ಮಯ್ಯ ಅವರ ಅಪ್ರತಿಮ ಸೇನಾ ಸೇವೆ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.
ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ಮಡಿಕೇರಿ ದಸರಾ ನೋಡಲು ಬಂದಿದ್ದನ್ನು ನೆನಪಿಸಿಕೊಂಡ ಅಖಿಲೇಶ್, ಕೊಡಗಿಗೆ ಅನೇಕ ಸಲ ಬಂದಿದ್ದೆ ಎಂದರಲ್ಲದೆ, ಮಡಿಕೇರಿ ಸೌಂದರ್ಯದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್’ನಲ್ಲಿ ಮ್ಯೂಸಿಯಂಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧುರಿ ಅವರಿಗೆ ಮ್ಯೂಸಿಯಂನ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆ ಬಗ್ಗೆ ಮಾಹಿತಿ ನೀಡಿದರು.