ಹೊಸದಿಗಂತ ವರದಿ, ಮೈಸೂರು:
ಬೆಂಗಳೂರಿನ ಎಂಜಿ ರೋಡ್‌ನ ಕಚೇರಿಯಲ್ಲಿ ಕುಳಿತು ಬರೆಯುತ್ತಿದ್ದ ನನಗೆ ಟಿಕೆಟ್ ನೀಡಿ, ೧೦ ವರ್ಷಗಳ ಕಾಲ ಸಂಸದರನ್ನಾಗಿ ಮಾಡಿದ ಬಿಜೆಪಿಗೆ ನಾನು ದ್ರೋಹ ಬಗೆಯುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಹೇಳಿದರು.
ಸೋಮವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ-ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ೨೦೧೪ ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಎಂದು ಬಿಜೆಪಿ ಹೈಕಮಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರಿ ಅಂತಾ ಕೇಳಿಲಿಲ್ಲ. ಈಗಲೂ ಅಷ್ಟೇ ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ ಎಂದು ಹೇಳಿದರು.
ನನಗೆ ಸಂಸದನಾಗುವ ಅವಕಾಶ ಹಾಗೂ ರಾಜಕೀಯವಾಗಿ ಬೆಳೆಯುವ ಶಕ್ತಿಯನ್ನು ನೀಡಿದ್ದು ಬಿಜೆಪಿ. ನನಗೆ ಪಕ್ಷ ತಾಯಿಯಿದ್ದಂತೆ, ಯಾವತ್ತೂ ತಾಯಿಗೆ ದ್ರೋಹ ಬಗೆಯುವುದಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಂತೆ ಇರುತ್ತೇನೆ. ನನ್ನನ್ನು ಕೇಳಿಎ ಬೇರೆ ಯಾರಿಗಾದರೂ ಟಿಕೆಟ್ ಕೊಡಬೇಕೆಂದೇನೂ ಇಲ್ಲ. ನನಗೆ ಯಾವುದೇ ಸ್ಥಾನ-ಮಾನ ಬೇಕಾಗಿಲ್ಲ. ಕಳೆದ ೧೦ ವರ್ಷದಲ್ಲಿ ಎಲ್ಲರ ನೀರೀಕ್ಷೆ ಮೀರಿ ಕೆಲಸ ಮಾಡಿದ್ದೇನೆ.
ನನ್ನ ಬಗ್ಗೆ ಸಹಾನುಭೂತಿ ವ್ಯಕ್ತವಾಗಿದೆ. ಪಕ್ಷದ ಅಭ್ಯರ್ಥಿಯಾಗಿರುವ ಯದುವೀರ್‌ರಿಗೆ ಏಜೆಂಟ್‌ನoತೆ ಕೆಲಸ ಮಾಡುತ್ತೇನೆ. ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ ದ್ರೋಹ ಮಾಡಲ್ಲ. ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತಾ ಎಂಬುದು ಈಗ ಪ್ರಸ್ತುತ ಅಲ್ಲ. ನಮಗೆ ಪಕ್ಷದ ಅಭ್ಯರ್ಥಿ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು ಇದಷ್ಟೇ ನಮಗೆ ಮುಖ್ಯ. ಉಳಿದ ವಿಚಾರಗಳೆಲ್ಲವೂ ಗೌಣ್ಯ, ಪಕ್ಷದ ಸಂಘಟನೆ ಮಾಡುವ ಅವಕಾಶ ನೀಡಿ, ಯದುವೀರ್‌ನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ, ಅವರ ಚಿಂತನೆಗಳು, ಆಲೋಚನೆಗಳು, ಕನಸುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಇದು ತುಂಬಾ ದೊಡ್ಡ ಕ್ಷೇತ್ರ. ಜನರನ್ನು ತಲುಪಲು ಮಾಧ್ಯಮ ಮುಖ್ಯ ಎಂದರು.