ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಮಾಲ್ಡಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯುವ ಪೀಳಿಗೆ ಅಥವಾ ‘Gen Z’ ಬಿಜೆಪಿ ಮೇಲೆ ಅಪಾರ ನಂಬಿಕೆ ಇಟ್ಟಿದೆ ಎಂದು ಘೋಷಿಸಿದರು.
ಇತ್ತೀಚೆಗೆ ಮುಂಬೈನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಜಯವನ್ನು ಮೋದಿ ಅವರು ಉದಾಹರಣೆಯಾಗಿ ನೀಡಿದರು. “ಬಿಎಂಸಿಯಲ್ಲಿ ಬಿಜೆಪಿ ಮೊದಲ ಬಾರಿಗೆ ದಾಖಲೆಯ ಗೆಲುವು ದಾಖಲಿಸಿದೆ. ಇದು ಭಾರತದ ಯುವಜನತೆ ನಮ್ಮ ಅಭಿವೃದ್ಧಿ ರಾಜಕಾರಣಕ್ಕೆ ನೀಡಿದ ಮನ್ನಣೆಯಾಗಿದೆ. ಇದೇ ಬದಲಾವಣೆಯ ಗಾಳಿ ಈಗ ಬಂಗಾಳದಲ್ಲೂ ಬೀಸುತ್ತಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾಳದ ಹಾಲಿ ಸರ್ಕಾರವನ್ನು “ಹೃದಯಹೀನ ಮತ್ತು ಕ್ರೂರ” ಎಂದು ಬಣ್ಣಿಸಿದ ಪ್ರಧಾನಿ, ಟಿಎಂಸಿ ಸರ್ಕಾರವು ರಾಜ್ಯದ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. “ಕೇಂದ್ರ ಸರ್ಕಾರ ಕಳುಹಿಸುವ ನೆರವು ಬಂಗಾಳದ ಬಡ ಜನರನ್ನು ತಲುಪದಂತೆ ತೃಣಮೂಲ ಸರ್ಕಾರ ತಡೆಯುತ್ತಿದೆ. ಅಭಿವೃದ್ಧಿಯ ಹಾದಿಯಲ್ಲಿ ಈ ಸರ್ಕಾರ ದೊಡ್ಡ ಅಡ್ಡಿಯಾಗಿದೆ,” ಎಂದು ಕಿಡಿಕಾರಿದರು.
ಬಂಗಾಳದ ಭವಿಷ್ಯ ಬದಲಾಗಬೇಕಾದರೆ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವುದು ಅನಿವಾರ್ಯ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದಲ್ಲಿ ನೈಜ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ಸಾಧ್ಯ ಎಂದು ಅವರು ಜನತೆಗೆ ಕರೆ ನೀಡಿದರು.


