ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ವ್ಯಾಪಾರಿಗಳಿಗೆ ಜಿಎಸ್ ಟಿ ನೋಟೀಸ್ ಜಾರಿ ಮಾಡುವ ಮೂಲಕ ಬಿಜೆಪಿಯವರು ತಾವು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಕೇಂದ್ರ ಬಿಜೆಪಿ ಸರ್ಕಾರ 2019ರಲ್ಲೇ ವಾರ್ಷಿಕ 40 ಲಕ್ಷಕ್ಕೂ ವಹಿವಾಟು ಮಿತಿ ನಿಗದಿಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದನ್ನು ಪಾಲಿಸುವಂತೆ ಆದೇಶ ನೀಡಿದ್ದಾರೆ. ಬಡವರಿಗೆ ಕಿರುಕುಳ ನೀಡುವುದನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು.
ತರಕಾರಿ, ಹಣ್ಣು, ಎಳನೀರು, ಹೂವಿನ ವ್ಯಾಪಾರಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಈಗಾಗಲೇ 14 ಸಾವಿರ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿದೆ. ಈ ಹಿಂದೆಯೇ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಜಿಎಸ್ ಟಿ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಜನರಿಗೆ ಹೇಗೆ ನೆರವಾಗಬಹುದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದು ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಅತಿ ಹೆಚ್ಚು ಜಿಎಸ್ ಟಿ ತೆರಿಗೆ ಕಟ್ಟುತ್ತಿರುವ ರಾಜ್ಯ ನಮ್ಮದು. ನಮ್ಮ ಬಡ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.