ಹೊಸದಿಗಂತ ವರದಿ,ಮೈಸೂರು :
ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ, ಜೆಡಿಎಸ್‌ನವರು ಭ್ರಮೆಯಲ್ಲಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಲೇವಡಿ ಮಾಡಿದರು.
ಶುಕ್ರವಾರ ಮೈಸೂರು ನಗರ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್-ಬಿಜೆಪಿಯವರು ಭ್ರಮೆಯಲ್ಲಿ ಕಾಯುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಗಟ್ಟಿಯಾಗಿದೆ. ಅಲುಗಾಡುವುದಿಲ್ಲ. ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲಾಗದು. ನಮ್ಮ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಹೇಳಿದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ಮಹಿಳೆಯರನ್ನು ಬ್ಲಾಕ್‌ಮೇಲ್ ತಂತ್ರಗಾರಿಕೆ ರಾಜಕಾರಣ ಮಾಡುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್‌ರ ಹಿಂದೂ ಕೋಡ್ ಬಿಲ್ ಬಗ್ಗೆ ಜನರಿಗೆಮನವರಿಕೆ ಮಾಡಿಕೊಡಬೇಕು. ಸರ್ವಾಧಿಕಾರಿ ಆಡಳಿತವನ್ನು ತೊಲಗಿಸಲು ಸ್ವಾತಂತ್ರ÷್ಯ ಸಂಗ್ರಾಮದ ಹೋರಾಟದ ಮಾದರಿಯಲ್ಲೇ ಮತ್ತೊಂದು ಚಳವಳಿ ಮಾಡಬೇಕು. ದೇವರು ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರ ಮನಸ್ಸನ್ನು ಕಲಕುವ ಯತ್ನ ನಡೆಯುತ್ತಿದೆ. ಇದಕ್ಕೆ ಸೊಪ್ಪು ಹಾಕಬಾರದು ಎಂದರು.
ಸೈನಿಕರ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ದುಡಿದಿದ್ದಕ್ಕೆ ಸರ್ಕಾರ ಅಧಿಕಾರಕ್ಕೆ ಬಂದಿರುವುದು. ಐದು ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಿದ ಮೇಲೆ ಫಲಾನುಭವಿಗಳು ಸರ್ಕಾರ, ಪಕ್ಷ, ಕಾರ್ಯಕರ್ತರ ಬಗ್ಗೆ ಏನು ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಆಳವಾಗಿ ಜನರ ಮನಸ್ಸಿನ ಮೇಲೆ ಇಂದಿರಾಗಾoಧಿ ಅವರ ಕಾರ್ಯಕ್ರಮಗಳು ತಳವೂರಿದ್ದವು. ಹಾಗಾಗಿ ಚುನಾವಣೆಯಲ್ಲಿ ಯಾರೇ ನಿಂತರೂ ಗೆಲ್ಲುತ್ತಿದ್ದರು. ಆಗ ಇಂದಿರಾ ಗಾಳಿ ಎನ್ನುತ್ತಿದ್ದರು. ಈಗ ಕಡಿಮೆಯಾಗುತ್ತಿದೆ. ಮೂಲ ಮತದಾರರು ಕಾಗ್ರೆಸ್ ನಂಬಿದ್ದೇವೆ. ಎಸ್‌ಸಿ, ಎಸ್ಟಿ, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದಾರೆ ಎಂದರು. ಉಳುವವನೇ ಭೂಮಿ ಒಡೆಯ, ಜೀತ ವಿಮುಕ್ತಿ, ಇನ್ನಿತರ ಕಾರ್ಯಕ್ರಮಗಳನ್ನು ವಿರೋಧಿಸಿದವರೇ ಕಾಂಗ್ರೆಸ್ ವಿರೋಧಿಸುತ್ತಾರೆ. ಹಾಗಾಗಿ ನಮ್ಮನ್ನು ಬೆಂಬಲಿಸುವವವರ ಸಂಪರ್ಕದಲ್ಲಿರಬೇಕು. ನಮ್ಮ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಪ್ರೀತಿಯಿಂದ ಮಾತನಾಡಿಸಬೇಕು ಎಂದು ತಿಳಿಸಿದರು.
ರಾಜಕೀಯದಲ್ಲಿ ಕೆಲವರು ಬೇರೆ ಬೇರೆ ಕಡೆ ಇರಬಹುದು. ಒಂದು ಪಕ್ಷ ಕುಟುಂಬದ ಸದಸ್ಯರು. ಒಟ್ಡಾಗಿ ಚುನಾವಣೆ ಗೆಲ್ಲುವುದು, ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸಬೇಕು. ಸಚಿವರು,ಶಾಸಕರಾದ ಮೇಲೆ ಬೇಕಾದ ರೀತಿಯಲ್ಲಿ ಆಡಲು ಸಾಧ್ಯವಿಲ್ಲ. ಸಾರ್ವಜನಿಕರ ಕೆಲಸ ಮಾಡಬೇಕು. ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಂತೆ ರಾಜಕೀಯದ ಅಧಿಕಾರ ಬಂದಾಗ ಜನಪರ ಧ್ವನಿ ಎತ್ತಬೇಕು. ನಮಗೂ ಒಂದು ಅವಕಾಶ ಬೇಕು ಎನ್ನುವ ಭಾವನೆ ಇದ್ದೇ ಇರುತ್ತದೆ ಎಂದು ನುಡಿದರು.