March 11, 2026
Wednesday, March 11, 2026
spot_img

ಟಿಕೆಟ್‌ ಸಿಗದಿದ್ದಕ್ಕೆ ಬೇಸರಿಸಿಕೊಂಡು ರಾಜೀನಾಮೆ ಘೋಷಿಸಿದ ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ

ಹೊಸದಿಗಂತ ವರದಿ ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಟಿಕೆಟ್ ದೊರೆಯದ ಕಾರಣ ಬೇಸರಗೊಂಡು ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಅವರು ರಾಜ್ಯ ಶಿಸ್ತು ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೩೭ ವರ್ಷದಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷ ನೀಡಿದ ಹಲವು ಜವಾಬ್ದಾರಿ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ ಎಂದು ದುಃಖಿತರಾದರು.
ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ನನ್ನ ಟಿಕೆಟ್ ತಪ್ಪಲು ಪಕ್ಷಕ್ಕೆ ದ್ರೋಹ ಬಗೆದವರು, ಉಚ್ಚಾಟಿತಗೊಂಡವರು ಕಾರಣರಾಗಿದ್ದು, ನನ್ನ ವಿರುದ್ಧ ಪಿತ್ತೂರಿ ಮಾಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಬೇರೆ ಪಕ್ಷದಿಂದ ಬಂದಿದ್ದಾರೆ.‌ ಕಳೆದ ಬಾರಿ ಚುನಾವಣೆ ಸಂಕನೂರ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಈ ಬಾರಿ ಮತ್ತೆ ಟಿಕೆಟ್ ಕೇಳಿದ್ದರು.‌ ಪಕ್ಷದ ಶೇ. ೯೦ ರಷ್ಟು ಜನರು ನನಗೆ ಟಿಕೆಟ್ ನೀಡಲು ಹೇಳಿದ್ದರು. ಕೋರ್ ಕಮಿಟಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸದಾನಂದ ಗೌಡರ ಸೇರಿದಂತೆ ಅನೇಕರು ನಮ್ಮ ಪರವಾಗಿ ನಿಂತಿದ್ದರು. ಬಹುತೇಕರು ಸಂಕನೂರ ಅವರಿಗೆ ಟಿಕೆಟ್ ನೀಡಬಾರದು ಎಂದು ಹೇಳಿದ್ದರು. ಆದರೂ ಸಹ ಪಕ್ಷ ಸಂಕನೂರ ಅವರಿಗೆ ಟಿಕೆಟ್ ನೀಡಿದೆ‌.

ಪಕ್ಷ ನನಗೆ ಮಾಡಿದ ಅನ್ಯಾಯ ಇಡೀ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಾಗಿದೆ. ಪಕ್ಷ ಎಂಟು ದಿನ ಗಡವು ನೀಡುತ್ತಿದ್ದು, ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಕ್ಷದ ಹಲವು ವಿಚಾರಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !