ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪ್ರಸಕ್ತ ವರ್ಷದಲ್ಲಿ ನಡೆಯುವ 9 ವಿಧಾನಸಭೆ ಚುನಾವಣೆಗಳಿಗೆ ರಣತಂತ್ರ ರೂಪಿಸಲಾಗುತ್ತಿದೆ.
ಸುದ್ದಿಗೋಷ್ಠಿ ನಡೆಸಿದ ಪಕ್ಷದ ನಾಯಕ ರವಿಶಂಕರ್ ಪ್ರಸಾದ್, ‘ಲೋಕಸಭೆ ಚುನಾವಣೆ ದೃಷ್ಟಿಯಿಂದ 2023ನೇ ಇಸವಿಯು ನಮಗೆ ಪ್ರಮುಖವಾಗಿದೆ. ಲೋಕಸಭೆ ಚುನಾವಣೆ ಹಾಗೂ 9 ರಾಜ್ಯಗಳ ವಿಧಾನಸಭೆ ಚುನಾವಣೆಗಳ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ. ಒಂದೇ ಒಂದು ಚುನಾವಣೆಯಲ್ಲಿ ಸೋಲು ಕಾಣಬಾರದು. ಈ ದಿಸೆಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಪಕ್ಷವನ್ನು ಸ್ಥಳೀಯ ಮಟ್ಟದಿಂದಲೇ ಬಲಿಷ್ಠಗೊಳಿಸುವ ದಿಸೆಯಲ್ಲಿ ಚರ್ಚಿಸಲಾಗಿದೆ. ದೇಶಾದ್ಯಂತ 1.3 ಲಕ್ಷ ಬೂತ್‌ಗಳಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ. ಹಾಗಾಗಿ, ಗುರುತಿಸಿದ ಬೂತ್‌ಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ ವಿಧಾನಸಭೆ ಚುನಾವಣೆಗಳ ಕುರಿತು ಸಹ ಕಾರ್ಯಕಾರಿಣಿಯಲ್ಲಿ ಅವಲೋಕನ ಮಾಡಿಕೊಳ್ಳಲಾಯಿತು. ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಹಾಗೂ ಹಿಮಾಚಲ ಪ್ರದೇಶದಲ್ಲಿ ಉಂಟಾದ ಹಿನ್ನಡೆ, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದರು.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರ ಉಪಸ್ಥಿತಿಯಲ್ಲಿ ನಡೆದ ಸಭೆ ನಡೆದಿದೆ.