ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ದಿ. ಪ್ರವೀಣ್ ನೆಟ್ಟಾರು ಅವರ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾನುವಾರ ಸಂಜೆ ಭೇಟಿ ನೀಡಿದರು.
ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ಅವರು ಕೊಡಿಯಾಲಬೈಲಿನ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನೆಟ್ಟಾರಿಗೆ ತೆರಳಿ, ದಿ. ಪ್ರವೀಣ್ ನೆಟ್ಟಾರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಅವರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಪಿ.ಎಫ್.ಐ.ಯನ್ನು ನಿಷೇಧಿಸಿದ್ದು, ಪ್ರವೀಣ್ ಕುಟುಂಬದೊಂದಿಗೆ ಬಿಜೆಪಿ ಸದಾ ಇರಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಅಭ್ಯರ್ಥಿ ಭಾಗೀರಥಿ ಮುರುಳ್ಯ, ಸೇರಿದಂತೆ ಸುಳ್ಯದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅವರೊಂದಿಗಿದ್ದರು.