ಹೊಸದಿಗಂತ ವರದಿ,ಕಾರವಾರ:
ಬೆಲೆಯೇರಿಕೆ ಹಾಗು ಬಿಜೆಪಿ ಶಾಸಕರನ್ನು ವಿಧಾನ ಮಂಡಲದಿಂದ ಅಮಾನತು ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಶನಿವಾರ ಇಲ್ಲಿಯ ಸುಭಾಸ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಎಂ ಎಲ್ ಸಿ ಗಣಪತಿ ಉಳವೇಕರ ರಾಜ್ಯ ಬಿಜೆಪಿ ಒಬಿಸಿ ಸದಸ್ಯ ರಾಜೇಂದ್ರ ನಾಯಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಶ್ರೀಮತಿ ಉಷಾ ಹೆಗಡೆ ಹಾಗು ಚಂದ್ರು ಎಸಳೆ ಮಾತನಾಡಿ ಕಾಂಗ್ರೆಸ್ ಸರಕಾರದ ನೀತಿ ನಿಯಮಗಳನ್ನು ಬಲವಾಗಿ ಖಂಡಿಸಿದರು.
ಬಿಟ್ಟಿ ಭಾಗ್ಯದ ಆಮಿಷವನ್ನು ತೋರಿಸಿ ಗದ್ದುಗೆ ಏರಿ ಈಗ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಇತ್ತೀಚೆಗೆ ಭಯೋತ್ಪಾದಕರು ಸಿಕ್ಕಿಬಿದ್ದರೂ ಅವರ ವಿರುದ್ಧ ಯಾವದೇ ಕಠಿಣ ಕ್ರಮ ತೆಗೆದು ಕೊಳ್ಳದೇ ಸಿದ್ದರಾಮಯ್ಯ ಸರಕಾರದ ಮೃದು ಧೋರಣೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಮುಖರು, ಕಾರವಾರ ಅಂಕೋಲಾ ಕ್ಷೇತ್ರದ 3 ಮಂಡಲದ ಅಧ್ಯಕ್ಷರಾದ ನಾಗೇಶ ಕುರ್ಡೇಕರ, ಸುಭಾಷ್ ಗುನಗಿ, ಸಂಜಯ ನಾಯ್ಕ. ಪ್ರಧಾನ ಕಾರ್ಯದರ್ಶಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗು ಕಾರವಾರ ನಗರ ಸಭಾ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು. ಉಪಾಧ್ಯಕ್ಷರು. ಸದಸ್ಯರು. ಮಹಿಳಾ ಮೋರ್ಚಾ. ಎಲ್ಲಾ ಮೋರ್ಚಾ ದವರು. ಬಿಜೆಪಿ ಸಂಘಟನೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗು ಪದಾಧಿಕಾರಿಗಳು ಕಾರವಾರ ತಾಲೂಕು ಸಾಮಾಜಿಕ ಜಾಲತಾಣದ ಪ್ರಮುಖ ಕಿಶನ್ ಕಾಂಬಳೆ ಇದ್ದರು.