ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ರಾಜ್ಯಸಭಾ ಉಪಚುನಾವಣೆ ಹಾಗೂ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಭಾರತೀಯ ಜನತಾ ಪಾರ್ಟಿ ತನ್ನ 11 ಅಧಿಕೃತ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪ್ರಮುಖ ರಾಜ್ಯಗಳ ಪ್ರಾದೇಶಿಕ ಸಮೀಕರಣ ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಹಿರಿಯ ನಾಯಕರಿಗೆ ಈ ಪಟ್ಟಿಯಲ್ಲಿ ಹೈಕಮಾಂಡ್ ಮಣೆ ಹಾಕಿದೆ.
ಪ್ರಮುಖ ನಾಯಕರಿಗೆ ಒಲಿದ ಅದೃಷ್ಟ
ಬಿಜೆಪಿಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಜಸ್ಥಾನದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರಿಗೆ ರಾಜಸ್ಥಾನದಿಂದಲೇ ಟಿಕೆಟ್ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದ ಅವರಿಗೆ ಈಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುತ್ತಿದೆ. ಇನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಅವರಿಗೆ ಮಧ್ಯಪ್ರದೇಶದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ರಾಜ್ಯವಾರು ಅಭ್ಯರ್ಥಿಗಳ ವಿವರ
ವಿವಿಧ ರಾಜ್ಯಗಳ ಒಟ್ಟು 11 ನಾಯಕರನ್ನು ಮೇಲ್ಮನೆಗೆ ಕಳುಹಿಸಲು ಬಿಜೆಪಿ ಹಸಿರು ನಿಶಾನೆ ತೋರಿದೆ.
ಗುಜರಾತ್: ರಾಜುಭಾಯ್ ಶುಕ್ಲಾ, ಮುಖೇಶ್‌ಭಾಯ್ ರಾಥ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘ್ ಜಿಭಾಯ್ ಕಂಜಾರಿಯಾ.
ಅರುಣಾಚಲ ಪ್ರದೇಶ: ತೈ ತಾಗಕ್.
ಮಣಿಪುರ: ಎ. ಶಾರದಾ ದೇವಿ.
ಸಂಬಂಧಪಟ್ಟ ರಾಜ್ಯಗಳಲ್ಲಿ ಬಿಜೆಪಿಯ ಶಾಸಕರ ಸಂಖ್ಯಾಬಲ ಹೆಚ್ಚಿರುವುದರಿಂದ, ಈ ಎಲ್ಲಾ 11 ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತ ಎನ್ನಲಾಗಿದೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡು, ಪ್ರಮುಖ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಬಿಜೆಪಿ ಈ ತಂತ್ರ ರೂಪಿಸಿದೆ.
ಜೂನ್ 18ಕ್ಕೆ ರಾಜ್ಯಸಭಾ ಚುನಾವಣೆ
ಕಳೆದ ತಿಂಗಳಷ್ಟೇ ಚುನಾವಣಾ ಆಯೋಗವು ದೇಶದ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸುವುದಾಗಿ ಘೋಷಿಸಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರ ನಿವೃತ್ತಿಯಿಂದಾಗಿ ಈ ಸ್ಥಾನಗಳು ಖಾಲಿ ಇವೆ. ಜೂನ್ 21ರಿಂದ ಜುಲೈ 19ರ ನಡುವೆ ವಿವಿಧ ದಿನಾಂಕಗಳಲ್ಲಿ ಈ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ.
ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು?
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3, ಜಾರ್ಖಂಡ್‌ನಲ್ಲಿ 2 ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜೂನ್ 8 ಕೊನೆಯ ದಿನಾವಾಗಿದೆ.



