ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ (BJP Candidates List) ಮಾಡಿದೆ. ನಿರೀಕ್ಷೆಯಂತೆಯೇ ಬಿಜೆಪಿಯು ಹಲವು ಬದಲಾವಣೆಗಳನ್ನು ಮಾಡಿದೆ. ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆಯಂಟನಿ ಪುತ್ರ ಅನಿಲ್ ಆಯಂಟನಿ, ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ತಿರುವನಂತಪುರಂನಿಂದ ಟಿಕೆಟ್ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್ ಸಿಂಗ್ ಚೌಹಾಣ್ ಅವರು ಕಣಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ, ಉನ್ನಾವೋದಿಂದ ಸಾಕ್ಷಿ ಮಹಾರಾಜ್, ತೆಲಂಗಾಣದ ಕರೀಂ ನಗರದಿಂದ ಬಂಡಿ ಸಂಜೀವ್ ಕುಮಾರ್, ಸಿಕಂದರಾಬಾದ್ ಜಿ. ಕಿಶನ್ ರೆಡ್ಡಿ ಅವರಿಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ನವದೆಹಲಿ ಕ್ಷೇತ್ರದ ಸಂಸದೆ, ಸಚಿವೆಯೂ ಆಗಿರುವ ಮೀನಾಕ್ಷಿ ಲೇಖಿ ಅವರನ್ನು ಕೈಬಿಡಲಾಗಿದೆ. ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ಬನ್ಸೂರಿ ಸ್ವರಾಜ್ ಅವರಿಗೆ ಸ್ಪರ್ಧಿಸಲಿದ್ದಾರೆ. ಇನ್ನು ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕೈಬಿಡಲಾಗಿದ್ದು, ಅಲೋಕ್ ಶರ್ಮಾ ಅವರಿಗೆ ಟಿಕೆಟ್ ಘೋಷಿಸಲಾಗಿದೆ.