ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸಂಪನ್ನ: ಮತ್ತೆ ಸರ್ಕಾರವನ್ನು ಅಧಿಕಾರಕ್ಕೆ ತರಲು ಕರೆ!

ಹೊಸದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆದ ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಭಾನುವಾರ ಸಂಪನ್ನಗೊoಡಿತು.
ಮೈಸೂರಿನ ಲಲಿತಮಹಲ್ ಹೋಟೆಲ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಬಿಜೆಪಿ ಸರ್ಕಾರ ದಲಿತರಿಗೆ ಜಾರಿಗೆ ತಂದಿರುವ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಗೌರವ ನೀಡುತ್ತಿರುವುದು, ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಗಳು, ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡುತ್ತಿದ್ದ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಬಗ್ಗೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಬಿಜೆಪಿ ಎಸ್ಸಿ ಮೋರ್ಚಾವನ್ನು ಇಡೀ ದೇಶದ್ಯಾಂತ ಮತ್ತಷ್ಟು ಪ್ರಬಲವಾಗಿ ಸಂಘಟನೆ ಮಾಡಿ, ಮತ್ತಷ್ಟು ಬಲಪಡಿಸಲು ನಿರ್ಣಯಿಸಲಾಯಿತು.
ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಗೌರವ ಕೊಡುವ ದೃಷ್ಟಿಯಿಂದ ಪಂಚಸ್ಥಳಗಳನ್ನು ಪ್ರವಾಸಿ ತಾಣವಾಗಿ ಸ್ಮಾರಕ ನಿರ್ಮಿಸಿ ಮೇಲ್ದರ್ಜೆಗೆ ಏರಿಸುವ ಮಾದರಿಯಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಕರ್ನಾಟಕ ರಾಜ್ಯದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು ಪಾದಸ್ಪರ್ಶ ಮಾಡಿದ 10 ಕ್ಷೇತ್ರಗಳಲ್ಲಿ ಸ್ಮಾರಕ ನಿರ್ಮಿಸಲು 20 ಕೋಟಿರೂ ಮಿಸಲಿಟ್ಟಿದ್ದಾರೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಎಸ್ಸಿ, ಎಸ್ಟಿಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಅಲ್ಲದೇ, ಈ ಸಮುದಾಯದವರಿಗೆ 70 ಯೂನಿಟ್ ವಿದ್ಯುತ್‌ನ್ನು ಉಚಿವವಾಗಿ ನೀಡುತ್ತಿದ್ದಾರೆ. ಎಸ್ಸಿ ಸಮುದಾಯ ವಿದ್ಯಾರ್ಥಿಗಳಿಗೆಂದು 100 ಹಾಸ್ಟೆಲ್‌ಗಳನ್ನು ತೆರೆಯುವ ನಿರ್ಧಾರ ಮಾಡಿದ್ದಾರೆ. ಅದಕ್ಕೆ ಹಣವು ಬಿಡುಗಡೆ ಆಗಿದೆ. ಅಲ್ಲದೇ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದವನ್ನು ಕಾರ್ಯಕಾರಣಿ ತಿಳಿಸಿತು.
ಇನ್ನೇನು ಕೆಲವು ತಿಂಗಳುಗಳಲ್ಲಿ ಕರ್ನಾಟದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಎಸ್ಸಿ ಮೋರ್ಚಾವನ್ನು ಸಂಘಟನೆ ಮಾಡಿ ಮತ್ತಷ್ಟು ಬಲಪಡಿಸಲು ನಿರ್ಣಯಿಸಿತು. ಎಸ್ಸಿ, ಎಸ್ಟಿ ಸಮುದಾಯದವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಸಂಪೂರ್ಣವಾಗಿ ಬೆಂಬಲಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಕರೆ ನೀಡಿತು.
ಇಡೀ ದೇಶದಲ್ಲಿ ಎಸ್ಸಿ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳೇನು, ಅದಕ್ಕೆ ಸರ್ಕಾರದಿಂದ ಆಗಬೇಕಾಗಿರುವ ಪರಿಹಾರಗಳೇನು, ಸರ್ಕಾರ ಸಮುದಾಯದ ಉದ್ಧಾರಕ್ಕೆ ಏನೆಲ್ಲಾ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಸಲಹೆಗಳನ್ನು ಸಂಗ್ರಹಿಸಲಾಯಿತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲು ನಿರ್ಣಯಿಸಿತು ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಕಾರ್ಯಕಾರಣಿಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ತಿಳಿಸಿದರು.ರಾಷ್ಟ್ರೀಯ ಕಾರ್ಯಕಾರಣಿಗೆ
151 ಜನ ರಾಷ್ಟ್ರೀಯ ಮಟ್ಟದ ಸದಸ್ಯರು ಬರಬೇಕಿತ್ತು .ಅದರಲ್ಲಿ 139 ಜನ ಆಗಮಿಸಿ ಪಾಲ್ಗೊಂಡಿದ್ದಾರೆ .
ವಿಶೇಷವಾಗಿ ಕರ್ನಾಟಕದ ಬಿಜೆಪಿ ರಚನೆಯ 39 ಜಿಲ್ಲೆಯ ಎಸ್ಸಿ ಮೋರ್ಚಾ ಅಧ್ಯಕ್ಷರಲ್ಲಿ 35 ಮಂದಿ ಅಧ್ಯಕ್ಷರು ಆಗಮಿಸಿ ಕಾರ್ಯಕಾರಣಿಯಲ್ಲಿ ಪಾಲ್ಗೊಂಡಿದ್ದರು.
ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರಕ್ಕೆ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಕೈಗೊಂಡ ನಿರ್ಣಯಗಳು, ನಡೆದ ಚರ್ಚೆಗಳು, ಬೆಳವಣಿಗೆಗಳನ್ನು ತಲುಪಿಸುತ್ತಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!