ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಕಾಂಗ್ರೆಸ್ಗೆ ಆಘಾತವಾಗಿದೆ. ಇತ್ತ ಬಿಜೆಪಿ ಕಾರ್ಯಕರ್ತರು ಸಿಹಿ ಖಾದ್ಯವಾದ ಜಿಲೇಬಿ, ಲಾಡು ಹಂಚಿ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಹರಿಯಾಣದಲ್ಲಿ ಸದ್ಯಕ್ಕೆ ಈಗ ಜಿಲೇಬಿಯದ್ದೇ ಹವಾ. ಸಾಮಾಜಿಕ ಜಾಲತಾಣಗಳಲ್ಲೂ ಈ ಸಿಹಿ ಖಾದ್ಯ ವೈರಲ್ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರು ತಮ್ಮಲ್ಲಿ ಮಾತ್ರವಲ್ಲದೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನೆಗೂ ಜಿಲೇಬಿಯನ್ನು ಪಾರ್ಸೆಲ್ ಕಳುಹಿಸಿದ್ದಾರೆ.
ವಿಜಯೋತ್ಸವದ ನಡುವೆ ಹರಿಯಾಣ ಬಿಜೆಪಿ ನಾಯಕರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮನೆಗೆ 1 ಕೆ.ಜಿ ಜಿಲೇಬಿಯನ್ನು ಆನ್ಲೈನ್ ಆಹಾರ ಪೂರೈಕೆದಾರ ಸ್ವಿಗ್ಗಿಯ ಮೂಲಕ ಕಳುಹಿಸಿದ್ದಾರೆ. ಸಿಹಿ ತಿಂಡಿಯನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿರುವ ಸ್ಕ್ರೀನ್ಶಾಟ್ ಅನ್ನು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ.
‘ಹರಿಯಾಣ ಬಿಜೆಪಿಯ ಎಲ್ಲ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿ ಅವರ ಮನೆಗೆ ಜಿಲೇಬಿಯನ್ನು ಕಳುಹಿಸಲಾಗಿದೆ. ಇದನ್ನು ಅವರು ಸ್ವೀಕರಿಸಬೇಕು’ ಎಂದು ಒಕ್ಕಣೆ ಬರೆದಿದೆ. ಅಲ್ಲದೇ, ಜಿಲೇಬಿ ಪಾರ್ಸೆಲ್ ಅನ್ನು ಹಣ ಪಾವತಿಸಿ (ಕ್ಯಾಶ್ ಆನ್ ಡೆಲಿವರಿ) ಸ್ವೀಕರಿಸುವಂತೆಯೂ ಮಾಡಿದೆ!.
ರಾಹುಲ್ ಗಾಂಧಿಗೇಕೆ ಜಿಲೇಬಿ ಆರ್ಡರ್?
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲು- ಗೆಲುವಿನಷ್ಟೇ ಸಿಹಿ ಖಾದ್ಯ ಜಿಲೇಬಿ ಸದ್ದು ಮಾಡಿದೆ. ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು, “ಸ್ಥಳೀಯವಾಗಿ ತಯಾರಿಸುವ ಜಿಲೇಬಿ ತಮಗೆ ಇಷ್ಟ. ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಮಾತು ರಾಮ್ ಹಲ್ವಾಯಿ ಜಿಲೇಬಿಯನ್ನು ನಾನು ಸವಿದಿದ್ದೇನೆ. ಅದು ಅತ್ಯಂತ ರುಚಿಕರವಾಗಿದೆ. ಇದನ್ನು ನನ್ನ ಸಹೋದರಿ ಪ್ರಿಯಾಂಕಾ ಅವರಿಗೂ ತೆಗೆದುಕೊಂಡು ಹೋಗುವೆ. ಜೊತೆಗೆ, ಈ ಜಿಲೇಬಿಯು ಜಗತ್ತಿನ ವಿವಿಧ ಪ್ರದೇಶಗಳಿಗೆ ತಲುಪಬೇಕು ಎಂದು ದೀಪೇಂದರ್ ಹೂಡಾ ಮತ್ತು ಭಜರಂಗ್ ಪುನಿಯಾ ಅವರಿಗೆ ತಿಳಿಸಿದ್ದೇನೆ” ಎಂದಿದ್ದರು.
ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಫಲಿತಾಂಶದ ಶುರುವಿನಲ್ಲಿ ಕಾಂಗ್ರೆಸ್ ದೊಡ್ಡ ಸಂಖ್ಯೆಯಲ್ಲಿ ಮುನ್ನಡೆಯಲ್ಲಿದ್ದಾಗ, ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ ಪರಸ್ಪರ ಜಿಲೇಬಿಯನ್ನು ಹಂಚಿಕೊಂಡಿದ್ದರು. ಆದರೆ, ಫಲಿತಾಂಶ ಉಲ್ಟಾ ಆಗಿ ಬಿಜೆಪಿ ಭರ್ಜರಿ ಗೆಲುವು ಕಂಡಿದೆ.