ಹೊಸ ದಿಗಂತ ವರದಿ, ಮೈಸೂರು:
ಬಳ್ಳಾರಿಯಲ್ಲಿ ನ.20ರಂದು ನಡೆಯಲಿರುವ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಸೇರಿ ಜಿಲ್ಲೆಯಿಂದ ಐದು ಸಾವಿರ ಮಂದಿ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಎಸ್.ಅಣ್ಣಯ್ಯ ನಾಯಕ ಹೇಳಿದರು.
ಗುರುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಿಂದ 20ರಿಂದ 30 ಬಸ್ಗಳು, ಗ್ರಾಮಾಂತರದಿoದ 30ರಿಂದ 40 ಬಸ್ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಬಳ್ಳಾರಿಗೆ ತೆರಳಲಿದ್ದಾರೆ. ಈ ಸಮಾವೇಶದಲ್ಲಿರಾಜ್ಯದ ಎಲ್ಲಾ ಭಾಗಗಳಿಂದ ಹತ್ತು ಲಕ್ಷಕ್ಕೂ ಹೆಚ್ಚಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಪರಿವಾರ ಮತ್ತು ತಳವಾರವನ್ನು ಎಸ್ಟಿಗೆ ಸೇರಿಸುವ ಜತೆಗೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ,.3ರಿಂದ 7ಕ್ಕೆ ಹೆಚ್ಚಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿರುವುದರಿoದ 70ಲಕ್ಷಕ್ಕೂ ಹೆಚ್ಚಿರುವ ನಾಯಕ ಸಮಾಜದ ಅಭಿವೃದ್ಧಿಗೆ ದಾರಿಯಾಗಲಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯ ಮತ್ತು ನಿರ್ದೇಶನಾಲಯವನ್ನು ಪ್ರತ್ಯೇಕವಾಗಿ ರಚಿಸಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚುಮಾಡಲು ನೆರವಾಗಲಿದೆ ಎಂದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಕೆ.ಆರ್.ಮಂಜುಳಾ ಮಾತನಾಡಿ, ಬಳ್ಳಾರಿ ಸಮಾವೇಶ ನಾಯಕ ಸಮಾಜದ ಶಕ್ತಿ ಪ್ರದರ್ಶನವಾಗಲಿದೆ. ಬಿಜೆಪಿ ಮೀಸಲಾತಿ ವಿರೋಧಿ ಎನ್ನುವ ಮಾತನ್ನು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ಗೆ ರಾಜ್ಯ, ಕೇಂದ್ರ ಸರ್ಕಾರ ಉತ್ತರ ನೀಡಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.4ರಷ್ಟು ಮೀಸಲಾತಿ ಪ್ರಮಾಣವನ್ನು ಜಾಸ್ತಿ ಮಾಡಿರುವುದರಿಂದ ನಾಯಕ ಸಮಾಜಕ್ಕೆ ಅನುಕೂಲವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಉಡುಗೊರೆ ನೀಡಿ ಋಣ ತೀರಿಸುವ ಕೆಲಸ ಮಾಡಲು ಸಮಾವೇಶ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಸಹ ವಕ್ತಾರ ಡಾ.ವಸಂತಕುಮಾರ್ ಮಾತನಾಡಿ, ಬಳ್ಳಾರಿ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸಚಿವ ಶ್ರೀರಾಮುಲು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ನಗರ ಅಧ್ಯಕ್ಷ ಲಕ್ಷ್ಮಣ್ , ಪ್ರಧಾನಕಾರ್ಯದರ್ಶಿ ಮಹೇಶ್ ನಾಯಕ್, ಕ್ಯಾತಮಾರನಹಳ್ಳಿ ಪ್ರಕಾಶ್, ವಕ್ತಾರ ವಸಂತ್ಕುಮಾರ್ ಇನ್ನಿತರರು ಹಾಜರಿದ್ದರು.