ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆ: ಆರ್. ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿಯಲ್ಲಿ ಹಾಲಿನ ಬೆಲೆ ಜಾಸ್ತಿ, ಸ್ಟಾಂಪ್ ಡ್ಯೂಟಿ ಜಾಸ್ತಿ,ವಿದ್ಯುತ್ ತೆರಿಗೆ, ಮನೆ ತೆರಿಗೆ ಜಾಸ್ತಿ ಮಾಡಿದರು. ಈಗ ಪೆಟ್ರೋಲ್ 3 ರೂಪಾಯಿ ಹಾಗೂ ಡೀಸೆಲ್ ಬೆಲೆ 3.50 ರೂಪಾಯಿ ಜಾಸ್ತಿ ಮಾಡಿದ್ದಾರೆ. ಈ ಬೆಲೆ ಏರಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ನಾಳೆ (ಜೂ.17) ಪ್ರತಿಭಟನೆ ಮಾಡಲಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆ ಕುರಿತ ಪೋಸ್ಟರ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಕರ್ನಾಟಕದ ಜನತೆ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ. ಹಾಲಿನ ಬೆಲೆ ಜಾಸ್ತಿ, ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು. ವಿದ್ಯುತ್ ಮತ್ತು ಮನೆ ತೆರಿಗೆ ಜಾಸ್ತಿ ಮಾಡಿದರು. ಈಗ ಪೆಟ್ರೋಲ್ 3 ರೂಪಾಯಿ, ಡಿಸೇಲ್ ಬೆಲೆ 3.50 ರೂಪಾಯಿ ಜಾಸ್ತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರ ಯೋಗ್ಯತೆಗೆ ಪಾರ್ಲಿಮೆಂಟ್ ನಲ್ಲಿ 100 ಸೀಟ್ ತಗೊಳ್ಳೋಕೆ ಆಗಿಲ್ಲ. ಅದರೆ, ಪೆಟ್ರೋಲ್ ರೇಟ್ ಮಾತ್ರವೇ ನೂರಕ್ಕೆ ದಾಟಿಸಿದ್ದಾರೆ. ತೆರಿಗೆ ಹಾಕೋಕೆ ಬೇರೆ ಎಲ್ಲೂ ಜಾಗ ಇಲ್ಲ. ಹೀಗಾಗಿ, ಕೊನೆಗೆ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತೆರಿಗೆ ಹಾಕಿದ್ದರು. ರೈತರಿಗೆ ಹಾಲಿನ ಸಬ್ಸಿಡಿ ಕೊಡ್ಲಿಲ್ಲ. ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ಅದನ್ನು ಇನ್ನೂ ಮಾಡಿಲ್ಲ. ಟಕಾ ಟಕ್ ಅಂತ ರಾಹುಲ್ ಗಾಂಧಿ ಹೇಳಿದ್ದರು. ಬಿಜೆಪಿ ನಾಳೆ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಬೆಂಗಳೂರಿನಲ್ಲಿ ನಾಳೆ ವಿಪಕ್ಷ ಆರ್.ಅಶೋಕ್ ಹಾಗೂ ವಿಜಯೇಂದ್ರ‌ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಜನ ಕಾಂಗ್ರೆಸ್ ಗೆ ವೋಟ್ ಹಾಕಿಲ್ಲ ಅಂತ ದರ ಏರಿಕೆ ಹೆಚ್ಚಳ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಕೂಡಲೇ ದರ ಏರಿಕೆ ವಾಪಸ್ ಪಡೆಯಬೇಕು. ಸರ್ಕಾರ ಪಾಪರ್ ಆಗಿದೆ, ಕಮಿಷನ್ ಹೊಡೆಯೋಕು ದುಡ್ಡು ಇಲ್ಲ. ಕಾರ್ಪೋರೇಷನ್ ವಾರ್ಡ್ ಆಫೀಸ್ ಅಡ ಇಡಲು ನೀಲಿ ನಕ್ಷೆ ರೆಡಿಯಾಗ್ತಿದೆ. ಈ ಸರ್ಕಾರ ಒಂದು ವರ್ಷ ಇದ್ದರೆ, ವಿಧಾನಸೌಧ ಅಡ ಇಡಬಹುದು. ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಇವರು ಹೋಗುವಾಗ ವಿಧಾನಸೌಧ ಅಡ ಇಟ್ಟು ಹೋಗಬಹುದು ಎಂದು ಆರೋಪಿಸಿದರು.

ರಾಜ್ಯದಲ್ಲಿ ದರ ಏರಿಕೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತೇವೆ. ಜನರು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಒತ್ತಾಯ ಮಾಡುತ್ತೇವೆ. ಆರ್ಥಿಕ ಇಲಾಖೆ ಸಂಪೂರ್ಣವಾಗಿ ದಿವಾಳಿ ಆಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಶ್ವೇತ ಪತ್ರ ಹೊರಡಿಸಿ ಎಂದು ಬಹಳಷ್ಟು ಸಾರಿ ಕೇಳಿದ್ದೇವೆ. ಆದರೂ, ಕ್ಯಾರೇ ಎನ್ನುತ್ತಿಲ್ಲ. ಕಾರ್ಪೊರೇಷನ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನ ಇವರಿಗೆ ಚೊಂಬು ತೋರಿಸ್ತಾರೆ. ಬಿಬಿಎಂಪಿ, ಇತರೆ ಚುನಾವಣೆಯಲ್ಲಿ ಗ್ಯಾರಂಟಿ ಚೊಂಬು ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿಗಾಗಿ 55,000 ಕೋಟಿ ರೂ. ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ‌. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೋ ರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!