ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಲು ಸ್ವಾತಿ ಮಲಿವಾಲ್ ಅವರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.
ಸ್ವಾತಿ ಮಲಿವಾಲ್ ಮೂಲಕ ಬಿಜೆಪಿ ಕೇಜ್ರಿವಾಲ್ ವಿರುದ್ಧ ಷಡ್ಯಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದೆ. ಸ್ವಾತಿ ಮಲಿವಾಲ್ ಅವರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ಅತಿಶಿ ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಾಗಿನಿಂದ ಬಿಜೆಪಿಯನ್ನು ಕೆಣಕುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಷಡ್ಯಂತ್ರ ರೂಪಿಸಿದೆ. ಅದರ ಅನ್ವಯ ಸ್ವಾತಿ ಮಲಿವಾಲ್ ಅವರನ್ನು ಮೇ 13ರಂದು ಬೆಳಿಗ್ಗೆ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ಕಳುಹಿಸಲಾಯಿತು. ಅವರು ಮುಖ್ಯಮಂತ್ರಿಯ ಮೇಲೆ ಆರೋಪ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಹೋಗಿದ್ದರು. ಆದರೆ, ಆ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಿಗದ ಕಾರಣದಿಂದ ಅವರನ್ನು ಬಿಟ್ಟು ಅವರ ಆಪ್ತನ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ನಡೆಸಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್, ಬಿಭವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನಗೆ ಪಿರಿಯಡ್ಸ್ ಆಗಿದೆ, ದಯವಿಟ್ಟು ಬಿಟ್ಟುಬಿಡಿ ಎಂದು ಹೇಳಿದ್ದರೂ ಕೇಳದೆ ನನ್ನ ಎದೆ, ಹೊಟ್ಟೆಗೆ ಒದ್ದು ದೌರ್ಜನ್ಯ ನಡೆಸಿದ್ದಾನೆ. ಅಲ್ಲಿಗೆ ಸೆಕ್ಯುರಿಟಿಯವರನ್ನು ಕರೆಸಿ ನನ್ನನ್ನು ಹೊರಗೆ ದಬ್ಬಿಸಿದ್ದಾನೆ ಎಂದು ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಪ್ ನಾಯಕರಾದ ಅತಿಶಿ, ‘ಸ್ವಾತಿ ಅವರ ಬಟ್ಟೆಗಳು ಹರಿದಿಲ್ಲ ಮತ್ತು ಅವರ ತಲೆಯ ಮೇಲೆ ಯಾವುದೇ ಗಾಯವಿಲ್ಲ.ಆದರೂ ಪದೇಪದೆ ಕಪಾಳಮೋಕ್ಷ ಮಾಡಿ, ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.