ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ತಿರುಚಿ ದೊಡ್ಡದು ಮಾಡಿದೆ. ಈ ಮೂಲಕ ಭಾರತ ನನ್ನ ಬಗ್ಗೆ ಮಾತನಾಡುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಡಿಎಂಕೆ ಮುಖಂಡ, ಸಚಿವ ಉದಯನಿಧಿ ಸ್ಟಾಲಿನ್ ಆರೋಪಿಸಿದರು.
ಕರೂರು ಜಿಲ್ಲೆಯಲ್ಲಿ ನಡೆದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಉದಯನಿಧಿ, ಸನಾತನ ಧರ್ಮವನ್ನು ಸೊಳ್ಳೆ, ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಕೊರೋನಾಗೆ ಹೋಲಿಸಿದ್ದು ಮತ್ತು ಅದರ ನಿರ್ಮೂಲನೆಗೆ ಮುಂದಾಗಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ತನ್ನ ಈ ಹಿಂದಿನ ಹೇಳಿಕೆಯಿಂದ ಉಂಟಾದ ಕೋಲಾಹಲಕ್ಕೆ ಪ್ರತಿಕ್ರಿಯಿಸಿದರು.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರರು ತಮ್ಮ ಭಾಷಣದಲ್ಲಿ ‘ಉದಯನಿಧಿ ಸ್ಟಾಲಿನ್ ನರಮೇಧಕ್ಕೆ ಕರೆ ನೀಡಿದ್ದೇನೆ’ ಎಂದು ನನ್ನ ಮಾತುಗಳನ್ನು ತಪ್ಪಾಗಿ ನಿರೂಪಿಸಿದ್ದಾರೆ. ಆದರೆ ನಾನು ಸಮ್ಮೇಳನದಲ್ಲಿ ಭಾಗವಹಿಸಿ, ‘ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ತಾರತಮ್ಯವನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ಮೋದಿಯವರು ಅದನ್ನು ತಿರುಚಿ, ಹಿಗ್ಗಿಸಿ ಇಡೀ ಭಾರತ ನನ್ನ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಯಾರೋ ದೇವಮಾನವರು ನನ್ನ ತಲೆಗೆ 5-10 ಕೋಟಿ ರೂ.ಬಹುಮಾನ ಘೋಷಿಸಿದರು. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ನ್ಯಾಯದ ಮೇಲೆ ನನಗೆ ನಂಬಿಕೆ ಇದೆ. ನನ್ನ ಟೀಕೆಗಳಿಗೆ ಕ್ಷಮೆಯಾಚಿಸಲು ನನ್ನನ್ನು ಕೇಳಲಾಯಿತು, ಆದರೆ ನಾನು ಕ್ಷಮೆಯಾಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಾನು ಸ್ಟಾಲಿನ್ ಅವರ ಮಗ, ಕಲೈಂಜರ್ ಅವರ ಮೊಮ್ಮಗ ಮತ್ತು ನಾನು ಅವರ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದೇನೆ ಎಂದು ಹೇಳಿದರು.