ಹೊಸದಿಗಂತ ವರದಿ ಯಲ್ಲಾಪುರ:
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು 3ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುವ ಮೂಲಕ ಬಿಜೆಪಿ ಸರ್ಕಾರ ಸಮಾಜದ ಸರ್ವ ಜನ- ಸರ್ವ ಸಮುದಾಯವನ್ನು ಸ್ಪರ್ಷಿಸುವ ಕಾರ್ಯ ಮಾಡಿದೆ ಎಂದು ಕೈಗಾರಿಕೆ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಭಾನುವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಬಿಜೆಪಿ ವಿಜಯಸಂಕಲ್ಪ ರಥ ಯಾತ್ರೆಯ ರೋಡ್ ಶೋದಲ್ಲಿ ಮಾತನಾಡಿ ಕೈಗಾರಿಕಾ ಇಲಾಖೆಯಲ್ಲಿಯೂ ಬಂಡವಾಳ ಹೂಡಿಕೆ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮೂಲಕ ಕೈಗಾರಿಕೋದ್ಯಮಕ್ಕೂ ಆದ್ಯತೆ ನೀಡಿ 10ಲಕ್ಷ ಕೋಟಿ ರೂ ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರಾಜ್ಯಕ್ಕೆ 7ಲಕ್ಷ ಕೋಟಿ ರೂ ವಿನಿಯೋಗಿಸುವ ಅವಕಾಶವಿದೆ. ಇದರಲ್ಲಿ ಶೇ 10ರಷ್ಟು ಮಾತ್ರ ಬೆಂಗಳೂರಿನಲ್ಲಿ ವಿನಿಯೋಗವಾದರೆ, ಉಳಿದ ಶೇ. 90ರಷ್ಟು ಹಣ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹೂಡಿಕೆಮಾಡಲಾಗುvuದು. ಯಲ್ಲಾಪುರಕ್ಕೂ ದೊಡ್ಡಮಟ್ಟದ ಉದ್ಯಮವೊಂದನ್ನು ತರುವ ಚಿಂತನೆ ಇದೆ ಎಂದರು.
ಖಾತೆಗೆ ಗೌರವ ತಂದವರು :
ಕಾರ್ಮಿಕರ ಜೊತೆಗೆ ಇಡೀ ಕುಟುಂಬದ ಕಲ್ಯಾಣದ ಹೊಣೆ ಹೊತ್ತು ಕಾರ್ಮಿಕ ಇಲಾಖೆಗೆ ಮೊಟ್ಟಮೊದಲ ಬಾರಿ ಒಂದು ಮೌಲ್ಯವನ್ನು ತಂದು ಕೊಟ್ಟಿರುವ ಶಿವರಾಮ ಹೆಬ್ಬಾರ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಪಂಚಾಯತ್ ರಾಜ್ ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಸಚಿವ ಹೆಬ್ಬಾರರು ಕ್ಷೇತ್ರದ ಅಭಿವೃದ್ಧಿ ಹಾಗೂ ಸರಕಾರದ ಸಾಧನೆಗಳ ಸರಮಾಲೆಯನ್ನು ಹೊತ್ತು ಚುನಾವಣೆಗೆ ಹೋಗುತ್ತಿದ್ದಾರೆ ಎಂದರು.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಚುನಾವಣೆ ಯಾವಾಗ ಬಂದರೂ ನಮ್ಮ ಸೈನಿಕರು ಎದುರಿಸಲು ಸನ್ನದ್ದರಾಗಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾನು ನಮ್ಮ ಪಕ್ಷವನ್ನು ಗೆಲ್ಲಿಸಿಕೊಡುವುದು ಶತಸಿದ್ಧ ಎಂದರು.