ಕಲಾಪದಲ್ಲಿ ಸರಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ: ವಿಧೇಯಕ ಪ್ರತಿ ಹರಿದು ಧರಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಇಂದು ಮಹಾಘಟಬಂಧನ್ ಸಭೆಯೇ ಹೈಲೈಟ್. ಕಲಾಪ ಶುರುವಾದ ಬೆನ್ನಲ್ಲೇ ಬಿಜೆಪಿ ನಾಯಕರು ಆಡಳಿತ ಪಕ್ಷ ವಿರುದ್ಧ ತಿರುಗಿಬಿದ್ದಿದ್ದು, ಹೊರ ರಾಜ್ಯಗಳಿಂದ ಬಂದ ನಾಯಕರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದ್ದ ವಿಚಾರ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.
ಈ ವೇಳೆ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟಿಸಿದರು. ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮುಂದೆ ಎಸೆದರು.

ಆರಂಭದಲ್ಲಿ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರವನ್ನು ಕಲಾಪದಲ್ಲಿ ಪ್ರಸ್ತಾಪಿಸಿದ ಆರ್. ಅಶೋಕ್, ನಿನ್ನೆ, ಗಣ್ಯರ ಸ್ವಾಗತಕ್ಕೆ ಹೊಟೇಲ್‌ಗೆ ಕರೆತರಲು ಹಿರಿಯ ಅಧಿಕಾರಿಗಳ ಬಳಕೆ ಮಾಡಲಾಗಿದೆ. ಇದು ಯಾವ ಕಾನೂನಿನಲ್ಲಿ ಬಳಸಿದ್ದೀರಿ? ಇದು ಅಪರಾಧ, ಶಿಷ್ಟಾಚಾರ ಉಲ್ಲಂಘನೆ. ಸರ್ಕಾರ ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಚಿವ ಎಚ್.ಕೆ. ಪಾಟೀಲ್ ಸಮಜಾಯಿಷಿ ನೀಡಿ, ರಾಜ್ಯಕ್ಕೆ ಗಣ್ಯರು ಬಂದಾಗ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ನಮ್ಮಿಂದ ಪ್ರೋಟೋಕಾಲ್ ಉಲ್ಲಂಘನೆ ಆಗಿಲ್ಲ. ಪ್ರೋಟೋಕಾಲ್ ಇಲ್ಲದವರಿಗೆ ನಮ್ಮ ನಾಯಕರು ಸ್ವಾಗತಿಸಿದ್ದಾರೆ. 26 ಪಕ್ಷಗಳು ಒಟ್ಟಾಗಿ ಸೇರಿದ್ದು ಬಿಜೆಪಿಯವರಿಗೆ ಸಹಿಸೋದಕ್ಕೆ ಆಗ್ತಿಲ್ಲ ಎಂದು ಹೇಳಿದರು. ಪಾಟೀಲ್‌ರ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.

ಲಾಲೂ ಪ್ರಸಾದ್ ಯಾದವ್ ಸಿಎಂ ಆಗಿದ್ದಾರಾ? ಅವರಿಗೆ ರವಿಶಂಕರ್ ಅನ್ನೋ ಐಎಎಸ್ ಅಧಿಕಾರಿ ನಿಯೋಜಿಸಿದ್ದೀರಲ್ಲ? ಸಿಎಸ್ ಅವರು ಅಧಿಕಾರಿಗಳ ನಿಯೋಜಿಸಿ ತಪ್ಪು ಮಾಡಿದ್ದಾರೆ ಎಂದು ಅಶೋಕ್ ಗುಡುಗಿದರು. ಈ ವೇಳೆ ಬಿಜೆಪಿ ಸದಸ್ಯರ ಮೇಲೆ ಸ್ಪೀಕರ್ ಯು.ಟಿ. ಖಾದರ್ ಗರಂ ಆದರು. ಈ ವಿಚಾರದಲ್ಲಿ ಚರ್ಚೆಗೆ ನೋಟಿಸ್ ಕೊಡಿ, ಚರ್ಚೆ ಮಾಡಿ. ನೋಟಿಸ್ ಕೊಡ್ರೀ.. ಇಷ್ಟ ಬಂದಾಗ ಮಾತಾಡೋ ನಿಯಮವಿಲ್ಲ ಎಂದು ಗರಂ ಆದರು.

ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಸಿಎಂ ಅವರು ಅಧಿಕಾರಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬಿಜೆಪಿಯಿಂದ ಧರಣಿ ಹಿನ್ನೆಲೆ ಸದನವನ್ನು ಸ್ಪೀಕರ್ ಸ್ವಲ್ಪ ಕಾಲ ಮುಂದೂಡಿದರು. ನಂತರ ಸ್ಪೀಕರ್ ಕೊಠಡಿಯಲ್ಲಿ ಬಿಜೆಪಿ ಸದಸ್ಯರ ಜತೆ ಸಂಧಾನ ಸಭೆ ನಡೆಯಿತು. ಧರಣಿ ಕೈಬಿಡುವಂತೆ ಕಾಂಗ್ರೆಸ್‌ನವರು ಮನವಿ ಮಾಡಿದರು. ವಿಧಾನಸಭೆ ಕಲಾಪ ಪುನಾರಂಭವಾದಾಗ ಸ್ಪೀಕರ್ ಸಂಧಾನ ವಿಫಲವಾಯಿತು. ಮತ್ತೆ ಸದನದ ಬಾವಿಯಲ್ಲಿ ಬಿಜೆಪಿ ಧರಣಿ ಮುಂದುವರಿಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಇಡೀ ಎರಡು ದಿನ ಅಧಿಕಾರಿಗಳು ರಾಜಕಾರಣಿಗಳ ಕಾವಲು ಕಾದಿದ್ದಾರೆ . ನಿಮ್ಮ ರಾಜಕೀಯ ತೆವಲಿಗಾಗಿ ರಾಜ್ಯದ ಮಾನ ಮರ್ಯಾದೆ ಹರಾಜು ಮಾಡಿದ್ದೀರಾ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರೋರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಎಂಎಲ್‌ಎ, ಎಂಪಿ ಅಲ್ಲದವರನ್ನೂ ಐಎಎಸ್ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಪುಡಿ ಪಕ್ಷಗಳ ಮುಖಂಡರನ್ನೆಲ್ಲ ಐಎಎಸ್ ಅಧಿಕಾರಿಗಳು ಸ್ವಾಗತ ಮಾಡಿರೋದು ಸರಿಯಲ್ಲ ಎಂದು ಕೆಂಡ ಕಾರಿದರು.

ಈ ವೇಳೆ ಮಾತನಾಡಿದ ಬಿಸಿಎಂ ಸಿದ್ದರಾಮಯ್ಯ ,ನಿಮ್ಮ ಬೆದರಿಕೆಗಳಿಗೆ ಹೆದರಲ್ಲ. ಬಿಜೆಪಿ ಧರಣಿ ಮಾಡುತ್ತಿರುವುದು ಸರಿಯಲ್ಲ. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಐಎಎಸ್ ಅಧಿಕಾರಿಗಳನ್ನು ಲೀಗಲ್ ಆಫೀಸರ್ ಮಾಡಿದ್ದರು. ಅಲ್ಲದೇ ತಮ್ಮ ಪ್ರಮಾಣವಚನ ಸಂದರ್ಭದಲ್ಲಿ ಇದೇ ನಿರ್ಧಾರ ತೆಗೆದುಕೊಂಡಿದ್ದರು. ಕುಮಾರಕೃಪಾಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನ ನಿಯೋಜಿಸಿದ್ರು. ಇವರ ಧರಣಿಗೆ ಸರ್ಕಾರ ಸೊಪ್ಪು ಹಾಕಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಿಎಂ ಸಿದ್ದು ಗರಂ ಆದರು.

ಈ ವೇಳೆ ಕೆಲವು ವಿಧೇಯಕಗಳ ಅಂಗೀಕಾರಕ್ಕೆ ಸರ್ಕಾರ ಮುಂದಾಯಿತು. ಧರಣಿಯ ನಡುವೆಯೇ ಸಿವಿಲ್ ಪ್ರಕ್ರಿಯೆಗಳ ಕರ್ನಾಟಕ ಸಂಹಿತೆಗಳ ತಿದ್ದುಪಡಿ ವಿಧೇಯಕ ಅಂಗೀಕರಿಸಿತು. ಚರ್ಚೆ ಇಲ್ಲದೇ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕಕ್ಕೂ ಅಂಗೀಕಾರ ದೊರೆಯಿತು. ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿ ಪರಿವರ್ತನೆ ಮಾಡಲು ಅವಕಾಶ ಕೊಡುವ ವಿಧೇಯಕವನ್ನೂ ಅಂಗೀಕರಿಸಲಾಯಿತು. ಈ ವೇಳೆ ಪ್ರತಿಪಕ್ಷಗಳ ಧರಣಿ ತೀವ್ರವಾಗಿ ವಿಧೇಯಕಗಳ ಪ್ರತಿಗಳನ್ನು ಹರಿದು ಬಿಸಾಡಿದರು.
ಈ ವೇಳೆ ಭೋಜನ ವಿರಾಮಕ್ಕೆ ಸದನ ಮುಂದೂಡದೇ ಮುಂದುವರೆಸಿದರು.ಈ ವೇಳೆ ಅವರ ಸ್ವೀಕರ್ಸ್ಥಾನವನ್ನು ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅಲಂಕರಿಸಿದರು. ಊಟಕ್ಕೆ ಬಿಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಧರಣಿ ನಿರತ ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಬಳಿ ಜಮಾಯಿಸಿ ಹರಿದ ಹಾಳೆ ಎಸೆದ ಆಕ್ರೋಶ ಹೊರಹಾಕಿದರು. ಸ್ಪೀಕರ್ ಪೀಠದಲ್ಲಿ ಕೂತಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮುಖದ ಮೇಲೆಯೇ ಹರಿದ ಹಾಳೆ ಎಸೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!