ಹೊಸದಿಗಂತ ವರದಿ ಮಂಡ್ಯ :
ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಜಿಲ್ಲೆ ಮತ್ತು ರಾಜ್ಯದ ಜನರಿಗೆ ಸಂಕಷ್ಟ ತಂದುಕೊಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತ ನಗರದಲ್ಲಿ ಪಲ್ಟಿ ಹೊಡೆದು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಲ್ಟಿ ಹೊಡೆದ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದ್ದರೂ ನ್ಯಾಯ ಪಡೆಯಲು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ರೈತರ ಜೀವನಾಡಿ ಕೃಷ್ಣರಾಜಸಾಗರದಲ್ಲಿ ನೀರಿನ ಲಭ್ಯತೆ,ಕುಡಿಯುವ ನೀರು ಮತ್ತು ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಬೇಕಾಗಿರುವ ನೀರು ಕುರಿತು ರಾಜ್ಯ ಸರ್ಕಾರಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಮುಂದಾಗ ಬೇಕಾಗಿದೆ ಎಂದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರು ಮತ್ತು ರೈತರ ಹಿತ ಕಾಪಾಡಲು ಸರ್ಕಾರಿ ನೌಕರರು ಕಾವೇರಿ ಹೋರಾಟಕ್ಕೆ ಧುಮುಕಿ ಬೆಂಬಲಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಕಾರ್ಯಕರ್ತರಾದ ಸಾತನೂರು ಯೋಗೇಶ್, ಹೊಸಹಳ್ಳಿ ಶಿವು, ಮಾದರಾಜೇ ಅರಸು, ಆನಂದ, ಕಿರಣ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.