ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಬಳಿ ಭಾನುವಾರ ಮೋದಿ ಪದಗ್ರಹಣದ ವೇಳೆ ಬಿಜೆಪಿ ವತಿಯಿಂದ ನಡೆದ ವಿಜಯೋತ್ಸವ ಮೆರವಣಿಗೆ ಬಳಿಕ ಬಿಜೆಪಿಯ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರ ಗುಂಪೊಂದು ನಡೆಸಿದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಳಿಯಾರ್ ನಿವಾಸಿಗಳಾದ ಮಹಮ್ಮದ್ ಶಕೀರ್( 28), ಅಬ್ದುಲ್ ರಝಾಕ್ (40), ಅಬೂಬಕರ್ ಸಿದ್ದೀಕ್(35), ಸವಾದ್(18), ಮೋನು ಯಾನೆ ಹಫೀಝ್ (24) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಬೋಳಿಯಾರ್ ನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಮೆರವಣಿಗೆ ಮುಗಿಸಿ ತೆರಳುತ್ತಿದ್ದ ಮೂವರು ಕಾರ್ಯಕರ್ತರಾದ ಧರ್ಮನಗರದ ಹರೀಶ್, ನಂದಕುಮಾರ್ ಹಾಗೂ ಕಿಶನ್ ಕುಮಾರ್ ಅವರಿಗೆ ಮುಸ್ಲಿಂ ಯುವಕರ ತಂಡವು ಬೋಳಿಯಾರ್ ಬಾರ್ ಮುಂಭಾಗದಲ್ಲಿ ಚೂರಿಯಿಂದ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ವ್ಯಕ್ತಿಗಳನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಹರೀಶ್ ಎಂಬವರಿಗೆ ಗಂಭಿರ ಗಾಯವಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.