ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಅಫಜಲಪುರಿನ ಸುಕ್ಷೇತ್ರ ಗಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರಕ್ಕೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಭೇಟಿ ನೀಡಿ ದರ್ಶನ ಆಶೀರ್ವಾದ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಿಜಾಪುರದ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಬುರಗಿ ಆಗಮಿಸಿದವರು ಬಿಜಾಪುರಕ್ಕೆ ತೆರಳುವ ವೇಳೆ ದತ್ತನ ದರ್ಶನ ಪಡೆದುಕೊಂಡರು.ರಾಜ್ಯದಲ್ಲಿ ತೀವ್ರವಾದ ಬರಗಾಲವಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ರಾಜ್ಯದ ಜನರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅವರ ಸುನಾಮಿ ಬೀಸುತ್ತಿದೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಾವು ಕನಿಷ್ಠ ೨೫ ಸ್ಥಾನಗಳನ್ನು ಗೆಲ್ಲುತ್ತೇವೆ ೨೮ನ್ನು ಗೆಲ್ಲಲು ಶ್ರಮಿಸುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹನುಮಂತರಾವ್ ಬಿರಾದಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಬಗಲಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್ ತೆಗನೂರ್, ಉಪಾಧ್ಯಕ್ಷ ಶಿವ ಅಷ್ಠಗಿ, ಬಿಜಾಪುರ ಜಿಲ್ಲಾ ಅಧ್ಯಕ್ಷ ಬಸವರಾಜ್ ಹೂಗಾರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಮುಖಂಡರಾದ ಗೋಪಾಲ್ ಕೃಷ್ಣ ಸರಡಗಿ, ನಾರಾಯಣ ಜಾಗೀರ್ದಾರ್, ರೇವಣಸಿದ್ದ ಬಡಾ, ಮಲ್ಲಿಕಾರ್ಜುನ್ ಗೊಳೆದ್, ಅಮಿತ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ ಉಪಸ್ಥಿತರಿದ್ದರು.
ದೇವಸ್ಥಾನ ಅರ್ಚಕರಾದ ಪ್ರಖ್ಯಾತ ಪೂಜಾರಿ, ಶರತ್ ಪುಜಾರಿ, ರೋಹಿತ್ ಪುಜಾರಿ ಅವರು ವಿಶೇಷ ಪೂಜೆ ನೆರವೇಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ