ಹೊಸದಿಗಂತ ವರದಿ, ಮಂಗಳೂರು:
ಕಮ್ಯೂನಿಷ್ಟರಿಗೆ ಅಸ್ತಿತ್ವ ನೀಡಿದ ಕೇರಳ ರಾಜ್ಯ ಮುಂದಕ್ಕೆ ಕಮ್ಯೂನಿಷ್ಟ್ ಕೈಯಿಂದ ತಪ್ಪಿ ಹೋಗುವ ಆತಂಕದಿಂದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಇಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರನ್ನು ನಂಬದ, ದೇಶ, ಧರ್ಮದ ಬಗ್ಗೆ ನಿಷ್ಠೆ ಇಲ್ಲದ ಕೇರಳ ಸರಕಾರಕ್ಕೆ ಈಗ ನಾರಾಯಣ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ ಎಂದು ಟೀಕಿಸಿದರು.
ಕೇರಳದ ಅನೇಕ ಭಾಗಗಳಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ಧ್ವಂಸ ಮಾಡಿದ ಮತ್ತು ನಾರಾಯಣ ಗುರುಗಳ ಭಾವಚಿತ್ರದ ಮೇಲೆ ಸಾರ್ವಜನಿಕವಾಗಿ ಮೊಳೆ ಒಡೆದು ಅಪಮಾನ ಮಾಡಿದ ಕಮ್ಯೂನಿಷ್ಟರಿಗೆ ಇಂದು ಏಕಾ ಏಕಿಯಾಗಿ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ. ಇದು ರಾಜಕೀಯವಲ್ಲದೆ ಮತ್ತೇನು ಅಲ್ಲ ಎಂದವರು ಹೇಳಿದರು.
ಕೇರಳದಲ್ಲಿ ನಾರಾಯಣ ಗುರುಗಳ ಶಿಷ್ಯರಿಂದ ಸ್ಥಾಪಿತವಾದಂತಹ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ(ಎಸ್ಎನ್ಡಿಪಿ) ಸಮಾಜದಲ್ಲಿ ಸುಧಾರಣೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ಎಸ್ಎನ್ಡಿಪಿಯ ಅನೇಕ ಪ್ರಮುಖರು ಕೇರಳದಲ್ಲಿ ಒಂದು ರಾಜಕೀಯ ಇಚ್ಛಾಶಕ್ತಿ ಬೇಕು ಎನ್ನುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ಇಟ್ಟುಕೊಂಡು ಭಾರತೀಯ ಧರ್ಮ ಜನಸೇನ( ಬಿಡಿಜೆಎಸ್) ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಇದು ಬಿಜೆಪಿಯ ಜೊತೆ ಅದು ಗುರುತಿಸಿಕೊಂಡಿದೆ. ಇದು ಬಲಿಷ್ಠವಾಗುತ್ತಿದ್ದು, ಇದರಿಂದ ಕಮ್ಯೂನಿಷ್ಟರು ಕಂಗಾಲಾಗಿದ್ದಾರೆ. ಬಿಡಿಜೆಎಸ್ನಿಂದ ಮುಂದೆ ಕೇರಳದಲ್ಲಿ ಕಮ್ಯೂಷ್ಟರಿಗೆ ದೊಡ್ಡ ಹೊಡೆತ ಬೀಳುವುದರಿಂದ ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಸುದರ್ಶನ್ ಹೇಳಿದರು.
ನಾರಾಯಣ ಗುರುಗಳ ಮೂಲ ಕ್ಷೇತ್ರವಾಗಿರುವ ಶಿವಗಿರಿಯಾಗಲಿ ಅಥವಾ ಎಸ್ಎನ್ಡಿಪಿಯಿಂದಾಗಲಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಉಲ್ಲೇಖನೀಯ. ಆದರೆ ಪಿಣರಾಯಿ ಸರಕಾರ ಮಾತ್ರ ರಾಜಕೀಯ ವಿಷಯವಾಗಿ ಬಳಸಿಕೊಂಡಿದೆ. ಇದರೊಂದಿಗೆ ಕಾಂಗ್ರೆಸ್ ಕೂಡ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಇತಿಹಾಸ ಏನೆಂಬುದು ಜನತೆಗೆ ಗೊತ್ತಿದೆ. ಹಿಂದೂ ಸಮಾಜದ ಏಕತೆಯನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ರಾಜಕೀಯ ಷಡ್ಯಂತ್ರದ ಮೂಲಕ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ನಿಂದ ಧರ್ಮದ ಬಗ್ಗೆ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲಎಂದು ಸುದರ್ಶನ ಮೂಡಬಿದಿರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ ಉಪಸ್ಥಿತರಿದ್ದರು.