ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪತ್ತೆಯಾಗಿದೆ.
ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಬ್ಲ್ಯಾಕ್ ಪ್ಯಾಂಥರ್ ಮತ್ತು ಚಿರತೆ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಎರಡು ದಶಕಗಳಿಂದ ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್‌ಗಳಿಗೂ ಕಾಣಿಸಿಕೊಳ್ಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆಯಂತೆ.
ಈ ಬ್ಲ್ಯಾಕ್ ಪ್ಯಾಂಥರ್‌ನ್ನು ಸಾಮಾನ್ಯವಾಗಿ ಕಪ್ಪು ಚಿರತೆ ಎಂದೇ ಕರೆಯುತ್ತಾರೆ. ಈ ಅಪರೂಪದ ಪ್ರಾಣಿಯ ಗೋಚರ ಭದ್ರಾ ಅಭಯಾರಣ್ಯದ ಜೀವವೈವಿಧ್ಯದ ಶ್ರೀಮಂತಿಕೆಗೆ ಮತ್ತಷ್ಟು ಮೆರುಗು ನೀಡಿದೆ.
ಸುಮಾರು 492.2 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಭದ್ರಾ ಅಭಯಾರಣ್ಯವು ಲಕ್ಷಾಂತರ ವನ್ಯಜೀವಿಗಳ ಆಶ್ರಯ ತಾಣವಾಗಿದೆ.

