ಹೊಸದಿಗಂತ ವರದಿ, ವಿಜಯಪುರ:
ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರಗೈದು, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ 32 ವರ್ಷದ ಮಹಿಳೆಯ ಮೇಲೆ ಆಕಾಶ ಹಡಗಲಿ ಹಾಗೂ ಅಭಿಷೇಕ ಸಜ್ಜನ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ, ಅತ್ಯಾಚಾರದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.
ಇನ್ನು ಮಹಿಳೆಯ ಕುಟುಂಬದ ಸದಸ್ಯರೊಬ್ಬರಿಗೆ ಆ ವಿಡಿಯೋ ಕಳಿಸಿದ್ದಾರೆ. ಮನೆಯಲ್ಲಿ ಮಹಿಳೆಗೆ ಈ ಬಗ್ಗೆ ವಿಚಾರಿಸಿದ್ದಾಗ, ಇಬ್ಬರು ಕೂಡಿ ನನಗೆ ಬಲಾತ್ಕಾರ ಮಾಡಿ, ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾಳೆ.
ಆಗ ತನ್ನ ಮಾನ ಮರ್ಯಾದೆ ಹೋಯಿತು, ತಾನು ಮನೆ ಬಿಟ್ಟು ಹೋಗುವೆ ಎಂದು ರೋಧಿಸಿದ್ದಾಳೆ, ಮರು ದಿನ ಮಹಿಳೆ ತನ್ನ ಮಗನನ್ನು ಕರೆದುಕೊಂಡು ಮನೆ ಬಿಟ್ಟು ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಏ. 27ಕ್ಕೆ ಪ್ರಕರಣ ದಾಖಲಾಗಿದೆ.