ಕೇರಳದಲ್ಲಿ ‘ಬ್ಲೀಡಿಂಗ್ ಐ’ ವೈರಸ್? ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ವೈರಸ್‌ಗಳು ಜನರ ಜೀವವನ್ನೇ ಹಿಂಡುತ್ತಿರುವ ವೇಳೆಯಲ್ಲೇ ಇದೀಗ ಬ್ಲೀಡಿಂಗ್ ಐ ವೈರಸ್ ಎಂಬ ಹೊಸ ರೋಗವೊಂದು ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.

ಇದನ್ನು ಮಾರ್ಬರ್ಗ್ ಎಂದೂ ಕರೆಯಲಾಗುತ್ತಿದೆ. ಈ ಸೋಂಕು ಕೇರಳದಲ್ಲಿ ಪತ್ತೆಯಾಗದಿದ್ದರೂ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆಯು ಸೂಚನೆ ನೀಡಿದೆ.

ವಿಶ್ವದಾದ್ಯಂತ 17 ದೇಶಗಳಲ್ಲಿ ಬ್ಲೀಡಿಂಗ್ ಐ ವೈರಸ್ ಹರಡಿದ್ದು ಇದು ರುವಾಂಡಾದಲ್ಲಿ 15ಕ್ಕೂ ಹೆಚ್ಚು ಜೀವಗಳನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ. ನೂರಾರು ಮಂದಿಗೆ ಈ ಸೋಂಕು ತಗುಲಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ದೇಶಗಳಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.

ಬ್ಲೀಡಿಂಗ್ ಐ ಸೋಂಕು ತಗುಲಿದರೆ ಅದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಈ ವೈರಸ್ ಎಬೋಲಾ ಜಾತಿಗೆ ಸೇರಿದ್ಧಾಗಿದೆ. ಇದು ಹಣ್ಣುಹಂಪಲುಗಳನ್ನು ತಿನ್ನುವ ಬಾವಲಿಗಳು ಮತ್ತು ಇತರ ಪಕ್ಷಗಳು ಹಾಗೂ ಪ್ರಾಣಿಗಳಿಂದ ಹೆಚ್ಚಾಗಿ ಹರಡುತ್ತವೆ.

ಈ ವೈರಸ್ ಸೋಂಕಿದ ವ್ಯಕ್ತಿಯ ದ್ರವಗಳಾದ ರಕ್ತ ಲಾವಾರಸ ಅಥವಾ ಮೂತ್ರದೊಂದಿಗೆ ನೇರ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳಿಗೆ ತೀವ್ರ ಜ್ವರ, ತೀವ್ರ ತಲೆನೋವು, ಸ್ನಾಯು ನೋವು, ವಾಂತಿ ಮತ್ತು ಅತಿಸಾರ ಅನುಭವಕ್ಕೆ ಬರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಇದು ಆಂತರಿಕ ರಕ್ತಸ್ರಾವ, ತಲೆ ತಿರುಗುವಿಕೆ, ಹೊಟ್ಟೆನೋವು, ಅಂಗವೈಕಲ್ಯಮತ್ತು ದೈಹಿಕ ತೊಂದರೆಗೆ ಕಾರಣವಾಗುತ್ತದೆ. ಅಲ್ಲದೆ ಸಾವು ಸಂಭವಿಸಬಹುದು.

ಲಭ್ಯವಿರುವ ಶುಶ್ರೂಷೆಯ ಗುಣಮಟ್ಟವನ್ನು ಅವಲಂಬಿಸಿ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸವಾಗಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಈ ವೈರಸ್ ತಗುಲಿದವರಿಗೆ ತೂಕ ನಷ್ಟ, ರಕ್ತಸಿಕ್ತ ವಾಂತಿ, ಮೂಗು, ಕಣ್ಣು, ಬಾಯಿ ಅಥವಾ ಯೋನಿಯಿಂದ ರಕ್ತಸ್ರಾವ ಇತ್ಯಾದಿ ಗೊಂದಲಗಳು ಅನುಭವವಾಗುತ್ತವೆ. ರೋಗಿಗಳಲ್ಲಿ ಆಳವಾದ ಕಣ್ಣುಗಳು, ಭಾವರಹಿತ ಮುಖಗಳು ಮತ್ತು ತೀವ್ರ ಆಲಸ್ಯವೂ ತಲೆದೋರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಆಂಟಿ ವೈರಸ್ ಲಭ್ಯವಿಲ್ಲ
ಮಾರ್ಬರ್ಗ್ ವೈರಸ್‌ಗೆ ಯಾವುದೇ ರೀತಿಯ ನಿರ್ದಿಷ್ಟ ಆಂಟಿ ವೈರಸ್ ಚಿಕಿತ್ಸೆ ಅಥವಾ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲ. ಪುನರ್ಜಲೀಕರಣ ಮತ್ತು ರೋಗದ ಲಕ್ಷಣದ ನಿರ್ವಹಣೆಯಂತಹ ಪೋಷಕ ಆರೈಕೆಯು ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸಲು ಜಾಗತಿಕ ಪ್ರಯತ್ನಗಳು ನಡೆಯುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!