ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ ಬಲೂಚ್ ಬಂಡುಕೋರ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF) ನಡೆಸಿದ ಮೂರು ದಿನಗಳ ಭಾರೀ ದಾಳಿ ‘ಆಪರೇಷನ್ ಬಿಎಎಂ’ (Operation BAM) ಎಂದು ಹೆಸರಿಸಲ್ಪಟ್ಟಿದೆ. ಜುಲೈ 9ರಿಂದ 11ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಪಾಕ್ ಸೇನೆಯ 84 ಗುರಿಗಳನ್ನು ಬಿಎಲ್‌ಎಫ್ ಟಾರ್ಗೆಟ್ ಮಾಡಿದ್ದು, ಕನಿಷ್ಠ 50 ಸೈನಿಕರು ಸಾವಿಗೀಡಾಗಿದ್ದು, 51 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಎಲ್‌ಎಫ್ ಹೇಳಿದೆ.
ಬಿಎಲ್‌ಎಫ್ ಪ್ರಕಟಿಸಿದ ಮಾಹಿತಿಯಂತೆ, ಈ ಕಾರ್ಯಾಚರಣೆಯಲ್ಲಿ ಸೇನೆಗೆ ಸೇರುವ ಮಿಲಿಟರಿ ಇಂಟೆಲಿಜೆನ್ಸ್ (MI) ಹಾಗೂ ISI ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದ 9 ಜನರನ್ನು ಬಲೂಚ್ ಹೋರಾಟಗಾರರು ಸಾವನ್ನಪ್ಪಿದ್ದಾರೆ. 72 ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ಕಾರ್ಯಾಚರಣೆಯಲ್ಲಿ ಐಇಡಿ ಸ್ಫೋಟಗಳಿಂದ ತೀವ್ರ ನಾಶ ಉಂಟಾಗಿದೆ. ಅಲ್ಲದೇ 7 ಮೊಬೈಲ್ ಟವರ್‌ಗಳಿಗೆ ಬೆಂಕಿ ಹಾಕಲಾಗಿದ್ದು, ಸೇನೆಯ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳು ಹಾಗೂ ಯಂತ್ರೋಪಕರಣಗಳನ್ನು ನಾಶಪಡಿಸಲಾಗಿದೆ.
ಬಿಎಲ್‌ಎಫ್ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ 24 ಖನಿಜ ಸಾಗಣೆ ಟ್ರಕ್‌ಗಳು ಹಾಗೂ ಅನಿಲ ಟ್ಯಾಂಕರ್‌ಗಳನ್ನು ನಾಶಪಡಿಸಲಾಗಿದೆ. ಜೊತೆಗೆ, ಪಾಕ್ ಸೇನೆ ಉಪಯೋಗಿಸುತ್ತಿದ್ದ ಕ್ವಾಡ್‌ಕಾಪ್ಟರ್ ಹಾಗೂ ಡ್ರೋನ್‌ಗಳನ್ನೂ ಬ್ಲಾಸ್ಟ್ ಮಾಡಲಾಗಿದೆ.
ಪಾಕಿಸ್ತಾನ ಸರಕಾರ ಮತ್ತು ಸೇನೆ ಬಲೂಚಿಸ್ತಾನದ ಸಂಪತ್ತನ್ನು ನಿರಂತರವಾಗಿ ದೋಚುತ್ತಿದೆ ಎಂದು ಆರೋಪಿಸಿರುವ ಬಿಎಲ್‌ಎಫ್, ಈಗ ಪಂಜಾಬಿ ನೇತೃತ್ವದ ಶಕ್ತಿಗಳು ಬಲೂಚಿಸ್ತಾನವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ. ಪಾಕ್ ಸೇನೆಯನ್ನು ವಸಾಹತುಶಾಹಿ ಶೋಷಣೆಯ ಪ್ರತೀಕವೆಂದು ಬಣ್ಣಿಸಿದ ಬಿಎಲ್‌ಎಫ್, ಬಲೂಚ್ ಜನರು ಸುಳ್ಳು ಪ್ರಜಾಪ್ರಭುತ್ವ ಮತ್ತು ಭ್ರಾಂತ ಧಾರ್ಮಿಕ ಘೋಷಣೆಗಳಿಂದ ಪ್ರಭಾವಿತಗೊಳ್ಳಲಾರರು ಎಂದು ಹೇಳಿದೆ.