ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ತುಮಕೂರು:
ಸಾಮಾನ್ಯವಾಗಿ ಶಾಂತವಾಗಿದ್ದ ತುಮಕೂರು ನಗರದಲ್ಲಿ ಮತ್ತೆ ರೌಡಿಗಳ ಮಚ್ಚು ಮತ್ತು ಲಾಂಗ್‌ಗಳ ಅಬ್ಬರ ಮರುಕಳಿಸಿದ್ದು, ನೆತ್ತರ ಕೋಡಿಯೇ ಹರಿದಿದೆ. ಈ ಮಾರಣಾಂತಿಕ ದಾಳಿಯಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆದಿದ್ದು, ಓರ್ವ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬನ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರಗಳು:
ದಾಳಿಗೊಳಗಾದವರಲ್ಲಿ 28 ವರ್ಷದ ಅಭಿ ಅಲಿಯಾಸ್ ‘ಟಿಬೆಟ್’ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿ, 32 ವರ್ಷದ ಮನೋಜ್ ಅಲಿಯಾಸ್ ‘ಪ್ಯಾಚ್’ ಎಂಬ ರೌಡಿಶೀಟರ್ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ದಾಳಿಯ ಸ್ವರೂಪವು ಅತ್ಯಂತ ಭೀಕರವಾಗಿತ್ತು. ಮೃತಪಟ್ಟಿರುವ ಅಭಿ (ಟಿಬೆಟ್) ಯ ಹೊಟ್ಟೆಗೆ ದುಷ್ಕರ್ಮಿಗಳು ಡ್ರ್ಯಾಗರ್‌ನಿಂದ ಇರಿದಿದ್ದು, ಆ ಬಳಿಕ ಲಾಂಗ್ ಮತ್ತು ಮಚ್ಚುಗಳಿಂದ ಆತನ ಮುಖಕ್ಕೆ ಹತ್ತಕ್ಕೂ ಹೆಚ್ಚು ಬಾರಿ ಮಾರಣಾಂತಿಕವಾಗಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ರೌಡಿಶೀಟರ್ ಮನೋಜ್ (ಪ್ಯಾಚ್) ಮೇಲೂ ತಲೆಗೆ ಮಚ್ಚಿನಿಂದ ದಾಳಿ ನಡೆಸಲಾಗಿದೆ.
ಕ್ಯಾತ್ಸಂದ್ರ ಮೂಲದ ಅಭಿ, ಜಾಸ್ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆ ತೆರಳಿದ್ದ ಸಂದರ್ಭದಲ್ಲೇ ಈ ದ್ವೇಷದ ಹಿನ್ನೆಲೆಯ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ತುಮಕೂರು ನಗರದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

