ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಸಣ್ಣ ವಿವಾದ ಒಂದು ಭೀಕರ ದುರಂತಕ್ಕೆ ಕಾರಣವಾಗಿದೆ. ರನ್ ಔಟ್ ತೀರ್ಪಿನ ವಿಚಾರವಾಗಿ ಉಂಟಾದ ವಾಗ್ವಾದದ ಬಳಿಕ 21 ವರ್ಷದ ಯುವ ಅಂಪೈರ್ ಡೋಲಾ ಅಜಿತ್ ಬಾಬು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಭಾನುವಾರ ಸಂಜೆ ನಗರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ಪಂದ್ಯ ಮಧ್ಯೆ ಅಂಪೈರ್ ನೀಡಿದ ರನ್ ಔಟ್ ತೀರ್ಪು ಕೆಲವು ಆಟಗಾರರು ಹಾಗೂ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು. ಇದೇ ವಿಷಯ ಬಳಿಕ ಜಗಳಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಇದನ್ನೂ ಓದಿ:
ಪಂದ್ಯ ಮುಗಿದ ನಂತರ 26 ವರ್ಷದ ಕಾಂತ ಕಿಶೋರ್ ಎಂಬಾತ ಅಂಪೈರ್‌ರನ್ನು ಮಾತುಕತೆ ಹೆಸರಿನಲ್ಲಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಇಬ್ಬರ ಮಧ್ಯೆ ವಾಗ್ವಾದ ತೀವ್ರಗೊಂಡಿದ್ದು, ಆರೋಪಿ ತನ್ನ ಬಳಿ ಇದ್ದ ಚಾಕುವಿನಿಂದ ಅಜಿತ್ ಬಾಬು ಅವರ ಎದೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಅಜಿತ್ ಬಾಬು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಪಡೆಯುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಯುವಕ ಚಿರಂಜೀವಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಹುಡುಕಾಟ ಮುಂದುವರಿದಿದೆ.



