April 5, 2026
Sunday, April 5, 2026
spot_img

ಹಳೆ ದ್ವೇಷಕ್ಕೆ ಹರಿಯಿತು ನೆತ್ತರಕೋಡಿ: ಸಣ್ಣ ಜಗಳ ಕೊ*ಲೆಯಲ್ಲಿ ಅಂತ್ಯ, ಎಂಟು ಜನ ಅಂದರ್

ಹೊಸದಿಗಂತ ವರದಿ ​ಬೆಳಗಾವಿ:

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಸಂಭ್ರಮದ ಜಾತ್ರೆಯ ನಡುವೆಯೇ ರಕ್ತದೋಕುಳಿ ಹರಿದಿದೆ. ಹಳೆ ರಾಜಕೀಯ ವೈಷಮ್ಯದಿಂದಾಗಿ ಸಂಗನಗೌಡ ಪಾಟೀಲ್ ಎಂಬುವವರನ್ನು ಎದುರಾಳಿ ಗುಂಪು ಭೀಕರವಾಗಿ ಹತ್ಯೆ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು ಎಂಟು ಜನರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ನಿವಾಸಿ 50 ವರ್ಷದ ಸಂಗನಗೌಡ ಪಾಟೀಲ್ ಕೊಲೆಯಾದ ದುರ್ದೈವಿ.

ಕಳೆದ ಕೆಲವು ವರ್ಷಗಳಿಂದ ಗ್ರಾಮದ ಎರಡು ಕುಟುಂಬಗಳ ನಡುವೆ ರಾಜಕೀಯ ಮತ್ತು ವೈಯಕ್ತಿಕ ವೈಷಮ್ಯ ಮನೆಮಾಡಿತ್ತು. ಭಾನುವಾರ ಜಾತ್ರೆಯ ಮೆರವಣಿಗೆ ಸಾಗುತ್ತಿದ್ದಾಗ, ಸಂಗನಗೌಡ ಅವರು ರಾಜಕೀಯ ವಿರೋಧಿಗಳ ಮನೆ ಮುಂದೆ ಕುಣಿಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆರೋಪಿಗಳು ನಮ್ಮ ಮನೆ ಮುಂದೆ ಕುಣಿಯಬೇಡ, ಮುಂದೆ ಹೋಗು ಎಂದು ವಾಗ್ವಾದ ನಡೆಸಿದ್ದಾರೆ. ಈ ಸಣ್ಣ ಜಗಳವೇ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ:

ಕೊಲೆ ಮಾಡಲು ಮೊದಲೇ ಸಜ್ಜಾಗಿದ್ದ ಆರೋಪಿಗಳ ಗುಂಪು ಸಂಗನಗೌಡ ಅವರ ಮೇಲೆ ಏಕಾಏಕಿ ಮುಗಿಬಿದ್ದಿದೆ. ಕುಡಗೋಲು, ಕೊಡಲಿ, ಚೈನ್, ಬಡಿಗೆ ಹಾಗೂ ಕಬ್ಬಿಣದ ರಾಡ್ ಗಳಂತಹ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ಧ ಸಂಗನಗೌಡ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪ್ರಕರಣದ ಬೆನ್ನಟ್ಟಿದ ಪೊಲೀಸರು ಕ್ಷಿಪ ಕಾರ್ಯಾಚರಣೆ ನಡೆಸಿ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ದೇಮಪ್ಪ ಬಳಗನ್ನವರ, ಮಂಜುನಾಥ ಬಳಗನ್ನವರ, ರುದ್ರಪ್ಪ ಬಳಗನ್ನವರ, ವಿಜಯ ಬಳಗನ್ನವರ, ಸೂರಪ್ಪ ಬಳಗನ್ನವರ, ಸಿದ್ದಪ್ಪ ಸಿಂಗಾಡಿ, ನಾಗರಾಜ ಬಳಗನ್ನವರ ಹಾಗೂ ಬಸವಂತಪ್ಪ ಬಳಗನ್ನವರ ಎಂದು ಗುರುತಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ಕೆ.ರಾಮರಾಜನ್.ಅವರು, ಹಳೆ ವೈಷಮ್ಯವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದು, ಸದ್ಯ ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !